ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ‘ಈಥಾ’ ಬಾಕ್ಸ್ ಆಫೀಸ್ ಕದನಕ್ಕೆ ಸಜ್ಜಾಗಿವೆ.
ಗೀತು ಮೋಹನ್ದಾಸ್ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’ ಆಗಸ್ಟ್ 26ರಂದು ತೆರೆಗೆ ಬರುತ್ತಿದ್ದರೆ, ಎರಡು ದಿನಗಳ ಬಳಿಕ ಆಗಸ್ಟ್ 28ರಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ‘ಈಥಾ’ ಬಿಡುಗಡೆಗೆ ಸಜ್ಜಾಗಿದೆ. ಈ ಎರಡು ದೊಡ್ಡ ಸಿನಿಮಾಗಳ ಮುಖಾಮುಖಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.
ಬಿಡುಗಡೆಯ ಮುನ್ನ ‘ಈಥಾ’ ಚಿತ್ರ ಟೈಟಲ್ ವಿವಾದದ ಸುಳಿಗೆ ಸಿಲುಕಿತ್ತು. ಮಹಾರಾಷ್ಟ್ರದ ಖ್ಯಾತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾ ಆಗಿದ್ದರೂ, ಅವರ ಹೆಸರಿನ ಬದಲಿಗೆ ‘ಈಥಾ’ ಎಂಬ ಶೀರ್ಷಿಕೆ ಬಳಸಿರುವುದಕ್ಕೆ ಎನ್ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿಠಾಬಾಯಿ ಕುಟುಂಬವೂ ಶೀರ್ಷಿಕೆಗೆ ವಿರೋಧ ವ್ಯಕ್ತಪಡಿಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಈ ಎಲ್ಲಾ ಊಹಾಪೋಹಗಳಿಗೆ ವಿಠಾಬಾಯಿ ಅವರ ಹಿರಿಯ ಪುತ್ರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ತಮಾಷಾ ಕಲಾವಿದೆ ಮಂಗಳಾ ಬನ್ಸೋಡೆ ಕರಾವಡಿಕರ್ ತೆರೆ ಎಳೆದಿದ್ದಾರೆ. ಕುಟುಂಬಕ್ಕೆ ಚಿತ್ರದ ಶೀರ್ಷಿಕೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟನೆ ನೀಡಿರುವುದರಿಂದ ಟೈಟಲ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ.
‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಗುರಿಯಾಗಿಸಿಕೊಂಡಿದೆ. ಶ್ರದ್ಧಾ ಕಪೂರ್ ಅವರ ‘ಈಥಾ’ ಎರಡು ದಿನಗಳ ಅಂತರದಲ್ಲಿ ಬಾಕ್ಸ್ ಆಫೀಸ್ ಅಖಾಡಕ್ಕಿಳಿಯುತ್ತಿದೆ. ಈ ಸ್ಟಾರ್ ವಾರ್ನಲ್ಲಿ ಅಂತಿಮವಾಗಿ ಮೇಲುಗೈ ಯಾರಿಗೆ ಸಿಗಲಿದೆ ಎಂಬುದು ಸಿನಿ ವಲಯದ ಕುತೂಹಲವಾಗಿದೆ.
—-





Be the first to comment