ಸ್ಪೈಡರ್‌ಮ್ಯಾನ್ ಪ್ರಚಾರದಲ್ಲಿ ರಿಷಬ್ ಶೆಟ್ಟಿ

ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರನ್ನು ಹಾಲಿವುಡ್‌ನ ದೈತ್ಯ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ತನ್ನ ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ವಿಶೇಷ ಜಾಗತಿಕ ಪ್ರಚಾರಕ್ಕಾಗಿ ಆಯ್ಕೆ ಮಾಡಿದೆ.

ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರೋಮೋ ಬಿಡುಗಡೆ ಮಾಡಿದೆ.  “Rishab Shetty entering Peter Parker’s world was never on anyone’s bingo card…” ಎಂಬ ಕ್ಯಾಪ್ಷನ್‌ನೊಂದಿಗೆ ಪ್ರೋಮೋ ಹಂಚಿಕೊಂಡಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವಿಡಿಯೊ ವೈರಲ್ ಆಗಿದೆ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರ  ‘ನೋ ವೇ ಹೋಮ್’ನ ಮುಂದುವರಿದ ಕಥೆಯಾಗಿದೆ.  ಪೀಟರ್ ಪಾರ್ಕರ್ ತನ್ನ ಸ್ನೇಹಿತ ನೆಡ್, ಪ್ರಿಯತಮೆ ಎಂಜೆ ಸೇರಿದಂತೆ ಇಡೀ ಜಗತ್ತಿನ ನೆನಪಿನಿಂದ ಅಳಿದುಹೋದ ಬಳಿಕ, ನ್ಯೂಯಾರ್ಕ್ ನಗರದಲ್ಲಿ ಸಂಪೂರ್ಣ ಒಂಟಿಯಾಗಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ಕಥಾಹಂದರವನ್ನು ಒಳಗೊಂಡಿದೆ.

ಪ್ರೋಮೋದಲ್ಲಿ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರದ ಅಂತ್ಯದ ಬಳಿಕ ಪೀಟರ್ ಪಾರ್ಕರ್ ಎದುರಿಸುವ ಒಂಟಿತನ, ತನ್ನ ಅಸ್ತಿತ್ವವನ್ನೇ ಜಗತ್ತಿನಿಂದ ಮರೆಮಾಚಿಕೊಳ್ಳುವ ಪರಿಸ್ಥಿತಿ ಹಾಗೂ ಸೂಪರ್ ಹೀರೋ ಆಗಿರುವ ಹೊಣೆಗಾರಿಕೆಯನ್ನು ರಿಷಬ್ ಶೆಟ್ಟಿ ತಮ್ಮ ವಿಶಿಷ್ಟ ಶೈಲಿಯಲ್ಲಿ ವಿವರಿಸಿದ್ದಾರೆ

ಟಾಮ್ ಹಾಲ್ಯಾಂಡ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜುಲೈ 30ರಂದು ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಹಾಲಿವುಡ್  ಬೃಹತ್ ಫ್ರಾಂಚೈಸಿಯ ಅಧಿಕೃತ ಪ್ರಚಾರದಲ್ಲಿ ಭಾಗವಹಿಸಿದ ಭಾರತದ ಮೊದಲ ನಟ ಎಂಬ ಅಪರೂಪದ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!