ನಕಲಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆ ನಟಿ ರುಕ್ಮಿಣಿ ವಸಂತ್ ಕಾನೂನು ಹಾಗೂ ಸೈಬರ್ ಕ್ರೈಂ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ರುಕ್ಮಿಣಿ ವಸಂತ್, “ ನಾನು ಮತ್ತು ನನ್ನ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಐ-ಜನರೇಟೆಡ್ ಚಿತ್ರಗಳನ್ನು ಗಮನಿಸಿದ್ದೇವೆ. ಅವುಗಳಲ್ಲಿ ನನ್ನನ್ನು ತೋರಿಸಿರುವ ರೀತಿ ಸಂಪೂರ್ಣ ನಕಲಿ, ಕೃತಕವಾಗಿ ಸೃಷ್ಟಿಸಲ್ಪಟ್ಟವಾಗಿವೆ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ. ಇದು ಕೇವಲ ಸುಳ್ಳು ಮಾಹಿತಿ ಹಂಚುವುದಲ್ಲ, ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆ ಆಗಿದೆ’ ಎಂದು ಹೇಳಿದ್ದಾರೆ.
‘ನಕಲಿ ಚಿತ್ರಗಳನ್ನು ಸೃಷ್ಟಿಸಿದವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ಹಾಗೂ ಸೈಬರ್ ಕ್ರೈಂ ದೂರು ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಕೃತಕ ಚಿತ್ರಗಳನ್ನು ಹಂಚಿಕೊಳ್ಳುವುದು, ಫಾರ್ವರ್ಡ್ ಮಾಡುವುದು ಅಥವಾ ಅವುಗಳೊಂದಿಗೆ ತೊಡಗಿಸಿಕೊಳ್ಳುವುದು ತಪ್ಪು ಮಾಹಿತಿಗೆ ಬೆಂಬಲ ನೀಡಿದಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಪೋಸ್ಟ್‌ಗಳನ್ನು ಹಂಚದಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಎಐ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೆಲೆಬ್ರಿಟಿಗಳ ನಕಲಿ ಫೋಟೋಗಳು, ಡೀಪ್‌ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರುಕ್ಮಿಣಿ ವಸಂತ್ ಅವರದ್ದು ಎನ್ನಲಾದ ಬಿಕಿನಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ.
—–





Be the first to comment