ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ಜುಲೈ 30ರಂದು ನಸುಕಿನ ಜಾವ 4:15ಕ್ಕೆ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಅನಾವರಣಗೊಳಿಸಲಾಗಿದೆ. ಟ್ರೇಲರ್ ಆರಂಭದಲ್ಲೇ ಯಶ್ ಅಭಿನಯದ ರಾವಣ ಲಂಕೆಯ ರಾಜನಾಗಿ ಅಧಿಕಾರ ವಹಿಸಿಕೊಳ್ಳುವ ದೃಶ್ಯವಿದೆ. ಅಯೋಧ್ಯೆಯಲ್ಲಿನ ಶ್ರೀರಾಮನ ಜೀವನದಿಂದ ಆರಂಭವಾಗುವ ರಾಮಾಯಣದ ಕಥೆಯನ್ನು ಪ್ರಮುಖ ಘಟ್ಟಗಳ ಮೂಲಕ ಪರಿಚಯಿಸಲಾಗಿದೆ.
ರಾವಣನಿಂದ ಅರಾಜಕತೆ ಮತ್ತು ವಿನಾಶ ಉಂಟಾಗುತ್ತಿದ್ದಂತೆ, ಭೂಮಿಯಲ್ಲಿ ಧರ್ಮಸ್ಥಾಪನೆ ಹಾಗೂ ಸಮತೋಲನ ಕಾಪಾಡಲು ವಿಷ್ಣು ಶ್ರೀರಾಮನ ಅವತಾರ ತಾಳುತ್ತಾರೆ. ನಂತರ ರಣಬೀರ್ ಕಪೂರ್ ಅಭಿನಯದ ಶ್ರೀರಾಮ ಪರಿಚಯವಾಗುತ್ತಾರೆ. ರಾಕ್ಷಸರ ವಿರುದ್ಧ ಹೋರಾಡಿ ತನ್ನ ಪ್ರಜೆಯನ್ನು ರಕ್ಷಿಸುವ ರಾಮನ ಬಾಲ್ಯದಿಂದ ಯುವಕನಾಗುವ ಪಯಣ, ಸೀತೆಯೊಂದಿಗೆ ವಿವಾಹವಾಗುವ ದೃಶ್ಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ನಂತರ ರಾಮನಿಗೆ 14 ವರ್ಷಗಳ ವನವಾಸ ವಿಧಿಸಲಾಗುತ್ತದೆ. ಸೀತೆ ಹಾಗೂ ಲಕ್ಷ್ಮಣ ರಾಮನೊಂದಿಗೆ ವನವಾಸಕ್ಕೆ ತೆರಳಲು ನಿರ್ಧರಿಸುತ್ತಾರೆ. ಮುಂದೆ ರಾವಣನು ಸೀತೆಯನ್ನು ಅಪಹರಿಸುವುದು, ಆ ಬಳಿಕ ನಡೆಯುವ ರಾಮ–ರಾವಣರ ನಡುವಿನ ಮಹಾಯುದ್ಧ ಹಾಗೂ ಧರ್ಮ ಮತ್ತು ಅಧರ್ಮದ ನಡುವಿನ ಅತ್ಯಂತ ಮಹತ್ವದ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುವ ದೃಶ್ಯಗಳೊಂದಿಗೆ ಟ್ರೇಲರ್ ಅಂತ್ಯಗೊಳ್ಳುತ್ತದೆ.
ರಾವಣನಾಗಿ ಯಶ್, ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣ ನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪಣಖೆಯಾಗಿ ರಕುಲ್ ಪ್ರೀತ್ ಸಿಂಗ್ ಹಾಗೂ ದಶರಥ ಮಹಾರಾಜನಾಗಿ ಅರವಿಂದ್ ಗೋವಿಲ್ ಅಭಿನಯಿಸಿದ್ದಾರೆ.
ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್ಎಕ್ಸ್ ಸಂಸ್ಥೆ ಡಿಎನ್ಇಜಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. ‘ರಾಮಾಯಣ: ಪಾರ್ಟ್ 1’ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಶ್ರೀಧರ್ ರಾಘವನ್ ಚಿತ್ರಕ್ಕೆ ಚಿತ್ರಕಥೆ ರೂಪಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
—–





Be the first to comment