ಆಧ್ಯಾತ್ಮದ ಶಕ್ತಿಯ ಮುಂದೆ ನನ್ನ ಸ್ಟಾರ್ಡಮ್ ಏನೂ ಅಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ರಜನಿಕಾಂತ್ ತಮ್ಮ ಜೀವನದ ಮರೆಯಲಾಗದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಆ ಘಟನೆ ನನ್ನ ಅಹಂಕಾರವನ್ನು ಸಂಪೂರ್ಣ ಮುರಿಯಿತು ಎಂದು ಹೇಳಿದ್ದಾರೆ.
ಆಶ್ರಮಕ್ಕೆ ಆರಂಭದಲ್ಲಿ ಕೇವಲ ಎರಡು ದಿನಗಳ ಕಾಲ ಹೋಗಿದ್ದ ರಜನಿ ಅಲ್ಲಿನ ವಾತಾವರಣಕ್ಕೆ ಮನಸೋತು 15 ದಿನಗಳ ಕಾಲ ಅಲ್ಲೇ ಉಳಿದಿದ್ದರು. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡಿದ್ದರು.
‘ಒಮ್ಮೆ ಗುರೂಜಿ ಆಶ್ರಮದ ಸುತ್ತ ಒಂದು ರೌಂಡ್ ಹಾಕೋಣ ಎಂದು ಹೇಳಿದರು. ನಾನು ದೊಡ್ಡ ನಟನಾಗಿದ್ದರಿಂದ ಜನರು ನನ್ನನ್ನು ಗುರುತಿಸಿ ಮುತ್ತಿಕೊಳ್ಳಬಹುದು. ಆಟೋಗ್ರಾಫ್ ಕೇಳಬಹುದು ಎಂದು ಅಂದುಕೊಂಡಿದ್ದೆ. ಅಲ್ಲಿ ತಮಿಳುನಾಡಿನ ನೂರಾರು ಜನರಿದ್ದರು. ಆದರೆ ಒಬ್ಬರೂ ನನ್ನನ್ನು ಗಮನಿಸಲಿಲ್ಲ’
‘ನಾನು ಕೈಬೀಸುತ್ತಿದ್ದರೂ ಯಾರೂ ನನ್ನತ್ತ ನೋಡಲಿಲ್ಲ. ಫೋಟೋ ಕೇಳುವುದೇ ಇರಲಿ, ಮಾತನಾಡಿಸಲೂ ಯಾರೂ ಬರಲಿಲ್ಲ. ಆ ಅನುಭವ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಒಡೆದು ಹಾಕಿತು. ಅಧ್ಯಾತ್ಮದ ಶಕ್ತಿಯ ಮುಂದೆ ನನ್ನ ಸ್ಟಾರ್ಡಮ್ ಏನೂ ಅಲ್ಲ ಎಂದು ಅಂದು ನನಗೆ ಅರ್ಥವಾಯಿತು’ ಎಂದು ರಜನಿ ಹೇಳಿದ್ದಾರೆ.
‘ಸಿನಿಮಾದ ಸ್ಟಾರ್ಡಮ್ ಬರುತ್ತದೆ ಮತ್ತು ಹೋಗುತ್ತದೆ. ಆದರೆ ಆಧ್ಯಾತ್ಮಿಕ ಸ್ಟಾರ್ಡಮ್ ಸಾವಿನ ನಂತರವೂ ಉಳಿಯುತ್ತದೆ’ ಎಂದು ರಜನಿ ಅವಲೋಕಿಸಿದರು.
_





Be the first to comment