ಆರ್.ಚಂದ್ರು. ಸೌತ್ ಇಂಡಿಯಾ ಚಿತ್ರರಂಗಕ್ಕೆ ಚಿರಪರಿಚಿತವಾಗಿದ್ದ ಹೆಸರಿದು. ಸಿನಿಮಾ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಈ ಮೂರು ಆರ್. ಚಂದ್ರು ಅವರ ಗೆಲುವಿನ ಮೂಲಮಂತ್ರ. ಈಗ ಆರ್.ಚಂದ್ರು ಅಂದರೆ ಭಾರತೀಯ ಚಿತ್ರರಂಗಕ್ಕೂ ಗೊತ್ತು. ಅಷ್ಟು ಎತ್ತರಕ್ಕೆ ಬೆಳೆದು ನಿಂತ ಅಪ್ಪಟ ಸಿನಿಮಾ ಪ್ರೇಮಿ. ಹೌದು, ಆರ್.ಚಂದ್ರು
ಸಾಮಾನ್ಯ ರೈತರೊಬ್ಬರ ಮಗ. ಕಲರ್ ಫುಲ್ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು ನಿಜಕ್ಕೂ ಹೆಗ್ಗಳಿಕೆ. ಒಬ್ಬ ನಿರ್ದೇಶಕನಾಗಿ ಯಶಸ್ವಿಯಾಗೋದು ಈ ಕಾಲಘಟ್ಟದಲ್ಲಿ ನಿಜಕ್ಕೂ ಕಷ್ಟ. ಸಿನಿಮಾ ಪ್ರೇಕ್ಷಕರಿಗೆ ರುಚಿಸುವ, ಕಾಡುವ, ಅಳಿಸುವ, ನಗಿಸುವ ಮತ್ತು ಟ್ರೆಂಡಿ ಸಿನಿಮಾಗಳನ್ನೇ ಕೊಡುವ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡವರು. ಇದಿಷ್ಟೇ ಆಗಿದ್ದರೆ ಹೆಗ್ಗಳಿಕೆ ಅನಿಸುತ್ತಿರಲಿಲ್ಲ. ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ನಿರ್ಮಾಣಕ್ಕೂ ಇಳಿದು ಅಲ್ಲೂ ಗೆಲುವಿನ ನಗೆ ಬೀರಿದವರು. ಇದು ಹೆಮ್ಮೆ ಅಲ್ಲದೆ ಇನ್ನೇನು.
ಶ್ರೀ ಸಿದ್ದೇಶ್ವರ ಮೂವೀಸ್ :
ಐದು ಯಶಸ್ವಿ ಸಿನಿಮಾಗಳ ನಿರ್ಮಾಣ ಮಾಡಿದ್ದು ಇದೇ ಆರ್.ಚಂದ್ರು. ಇದು ಸುಲಭವಲ್ಲ. ಆರ್.ಚಂದ್ರು ಅವರ ಕನಸು ದೊಡ್ಡದು. ಅವರು ಕಂಡ ಕನಸಿಗೆ ಅವರೇ ಬಣ್ಣ ಹಚ್ಚಿದರು. ಅದನ್ನು ಪ್ರೇಕ್ಷಕರು ತಮ್ಮ ಕಲರ್ ಫುಲ್ ಕಣ್ಣಿಂದ ಮೆಚ್ಚಿಕೊಂಡು ಇನ್ನಷ್ಟು ರಂಗಾಗಿಸಿದರು. ಹೌದು, ಆರ್.ಚಂದ್ರು ನಿರ್ಮಾಣ ಮಾಡುವಷ್ಟರ ಮಟ್ಟಕ್ಕೆ ಬೆಳೆದಿದ್ದು ದೊಡ್ಡ ಸಾಧನೆ. ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಹುಟ್ಟುಹಾಕಿ ಕನಸು ಸಾಕಾರಗೊಳಿಸುವ ಕಾರ್ಯಕ್ಕೆ ಮುಂದಾದರು. ಅವರ ಕನಸು ಎಂದಿಗೂ ಮರೆಯದಷ್ಟು ನನಸಾಯಿತು. ಅವರ ಕೆಲಸ ಹೆಸರಾಯಿತು. ಸಿನಿಮಾ ಉಸಿರಾಯಿತು. ಕಾಯಕ ನಿರಂತರವಾಯಿತು. ದೊಡ್ಡ ಯಶಸ್ಸು ಕಂಡರೂ ಸರಳ ವ್ಯಕ್ತಿತ್ವ. ಈಗ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಾಗಿದೆ. ಸಿನಿಮಾ ತಪಸ್ವಿ ಚಂದ್ರು ನಿರಂತರ ಸಿನಿಮಾ ಕಾಯಕಕ್ಕೆ ಸಜ್ಜಾಗಿದ್ದಾರೆ.
ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಣ :
ಆರ್. ಚಂದ್ರು ಮೂರು ಹೊತ್ತು ಸಿನಿಮಾ ಧ್ಯಾನ ಮಾಡುವವರು. ಸಿನಿಮಾ ಬಿಟ್ಟರೆ ಮತ್ತೇನೂ ಇಲ್ಲ ಎನ್ನುವ ಅವರು, ತಮ್ಮ ಫ್ಯಾಮಿಲಿಯಷ್ಟೇ ಸಿನಿಮಾವನ್ನು ಅಪ್ಪಿ ಮುದ್ದಾಡುವ ವ್ಯಕ್ತಿ. ಆ ಕಾರಣಕ್ಕೆ ಅವರು ಕನಸಿನ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಮಾಡಿ ಅದರಲ್ಲಿ ಚಾರ್ಮಿನಾರ್, ಮಳೆ, ಐ ಲವ್ ಯು ಕನಕ ಮತ್ತು ಕಬ್ಜ ಮಾಡಿದವರು. ಸ್ಟಾರ್ಗಳನ್ನೇ ಹಾಕಿಕೊಂಡು ಸಿನಿಮಾ ಮಾಡೋದು ಮತ್ತೊಂದು ಧೈರ್ಯದ ಕೆಲಸ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಅವರ ಎದೆಗಾರಿಕೆ, ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ ಮತ್ತು ಶ್ರಮದ ಸಾರ್ಥಕತೆ.
ರಿಯಲ್ ಸ್ಟಾರ್ ಉಪೇಂದ್ರ, ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್ ಅಂತಹ ಸ್ಟಾರ್ಗಳು ಆರ್.ಚಂದ್ರು ಅವರ ಬ್ಯಾನರ್ ಸಿನಿಮಾಗಳಲ್ಲಿ ನಟಿಸಿ ಗೆಲುವು ಕಂಡವರು. ಚಂದ್ರು ಸದಾ ಸಕ್ಸಸ್ ಬೆನ್ನತ್ತಿದವರು. ಹಾಗಾಗಿ ದೊಡ್ಡದಾಗಿಯೇ ಯೋಚನೆ ಮಾಡುವ ಮೂಲಕ ಬಿಗ್ ಬಜೆಟ್ ಸಿನಿಮಾಗಳಿಗೆ ಕೈ ಹಾಕಿದ್ದಾರೆ. ಕನ್ನಡಕ್ಕಷ್ಟೇ ಸೀಮಿತವಾಗಬಾರದು ಅನ್ನುವ ಕಾರಣಕ್ಕೆ ತಮ್ಮ ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಜೊತೆಗೆ ಈಗ ಆರ್ ಸಿ ಸ್ಟುಡಿಯೋಸ್ ಎಂಬ ದೊಡ್ಡ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಆರ್ ಸಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿ, ಶುಭ ಕೋರಿದ್ದು ವಿಶೇಷ.
ಆರ್ ಸಿ ಸ್ಟುಡಿಯೋಸ್ ಎಂಬ ಪ್ಯಾನ್ ಇಂಡಿಯಾ ಬ್ಯಾನರ್ :
ಆರ್.ಸಿ. ಸ್ಟುಡಿಯೋಸ್. ಇದು ಆರ್ ಚಂದ್ರು ಅವರ ಬಹುದೊಡ್ಡ ಕನಸು. ಇದೊಂದು ಪ್ಯಾನ್ ಇಂಡಿಯಾ ಬ್ಯಾನರ್. ಕನ್ನಡಕ್ಕೆ ಸೀಮಿತವಾಗಿದ್ದ ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಅನ್ನು ಸೇರಿಸಿಕೊಂಡೇ ಆರ್.ಸಿ. ಸ್ಟುಡಿಯೋಸ್ ಹುಟ್ಟು ಕಂಡಿದೆ. ಈವರೆಗೆ ಸ್ಟಾರ್ ನಟರ ಐದು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ಆರ್.ಚಂದ್ರು, ಈಗ ಆರ್.ಸಿ. ಸ್ಟುಡಿಯೋಸ್ ಸಂಸ್ಥೆ ಮೂಲಕ ಒಟ್ಟಾರೆ ಆರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಅವೆಲ್ಲವೂ ಬಿಗ್ ಬಜೆಟ್ ಸಿನಿಮಾಗಳು, ಬಿಗ್ ಸ್ಟಾರ್ಸ್ ಸಿನಿಮಾಗಳು ಅನ್ನೋದು ವಿಶೇಷ. ಆ ಸಾಲಿನಲ್ಲಿರುವ ಸಿನಿಮಾಗಳ ಪೈಕಿ “ಫಾದರ್” ಎಂಬ 6ನೇ ಸಿನಿಮಾ ಏಪ್ರಿಲ್ 27ರಂದು ಅದ್ಧೂರಿಯಾಗಿ ಮುಹೂರ್ತ ನೆರವೇರುತ್ತಿದೆ. ಹುಚಡುಗಿಯರ ಪಾಲಿನ ಪ್ರೀತಿಯ ಡಾರ್ಲಿಂಗ್ ಎನಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಮತ್ತು ಪಂಚಭಾಷೆ ನಟ ಪ್ರಕಾರ್ ರೈ ಈ ಚಿತ್ರದ ಮುಖ್ಯ ಆಕರ್ಷಣೆ.
ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಅಪ್ಪನ ಮಗನ ಬಾಂಧವ್ಯ ಕುರಿತಾದ ಕಥಾಹಂದರ ಹೊಂದಿರುವ ಸಿನಿಮಾ. ಅಪ್ಪನ ಮೌಲ್ಯ ಸಾರಿದ್ದ ಆರ್. ಚಂದ್ರು ಅವರ ಮೊದಲ ಸೂಪರ್ ಹಿಟ್ ಸಿನಿಮಾ ತಾಜ್ ಮಹಲ್ ಇಂದಿಗೂ ಕಾಡುತ್ತೆ. ಫಾದರ್ ಕೂಡ ಅಂಥದ್ದೇ ಕಂಟೆಂಟ್ ಹೊಂದಿರುವ ಸಿನಿಮಾ ಅನ್ನೋ ಫೀಲ್ ಹೆಸರಲ್ಲೇ ಇದೆ. ಮೊದಲಿಂದಲೂ ಆರ್. ಚಂದ್ರು ಕಂಟೆಂಟ್ಗೆ ಒತ್ತು ಕೊಟ್ಟವರು. ಈ ಫಾದರ್ ಕೂಡ ಅದಕ್ಕೆ ಹೊರತಾಗಿರಲ್ಲ ಎಂಬ ಭಾವನೆ ನಮ್ಮದು. ಸದ್ಯಕ್ಕೆ ಫಾದರ್ ಏಪ್ರಿಲ್ 27 ರಂದು ಸೆಟ್ಟೇರುತ್ತಿದೆ. ಅಂದಿನಿಂದಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಆರ್.ಸಿ. ಸ್ಟುಡಿಯೋಸ್ ಮೂಲಕ ತೆರೆಯಮೇಲೆ ತಯಾರಾಗುತ್ತಿರುವ ಫಾದರ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಎಂದಿನಂತೆ ನಿಮ್ಮ ಪ್ರೀತಿ ಹಾಗು ಬೆಂಬಲ ಇರಲಿ. ಎಲ್ಲರನ್ನೂ ಫಾದರ್ ಮುಹೂರ್ತಕ್ಕೆ ಪ್ರೀತಿಯಿಂದಲೇ ಆರ್.ಚಂದ್ರು ಆಹ್ವಾನಿಸುತ್ತಿದ್ದಾರೆ. ಪ್ರೀತಿಯ ಆಹ್ವಾನಕ್ಕೆ ಓಗೊಟ್ಟು ಬಂದು ಹರಸಿ ಹಾರೈಸಿ.
ಹಳ್ಳಿಯಿಂದ ಮುಂಬೈವರೆಗೂ ಮಿಂಚಿದ ರೈತನ ಮಗ!
ಆರ್.ಚಂದ್ರು ಒಬ್ಬ ರೈತಾಪಿ ಕುಟುಂಬದಲ್ಲಿ ಬೆಳೆದವರು. ಸಾಮಾನ್ಯ ರೈತನ ಮಗನಾಗಿ ಸಿನಿಮಾ ಪ್ರೀತಿಯಿಂದ ಹಳ್ಳಿಬಿಟ್ಟು ಗಾಂಧಿನಗರಕ್ಕೆ ಲಗ್ಗೆ ಇಟ್ಟವರು. ಅತಿಯಾದ ಶ್ರದ್ಧೆ ಮತ್ತು ಶ್ರಮದಿಂದ ಯಶಸ್ವಿ ಹನ್ನೆರೆಡು ಸಿನಿಮಾಗಳನ್ನು ನಿರ್ದೇಶಿಸಿ, ಐದು ಸಿನಿಮಾಗಳನ್ನು ನಿರ್ಮಿಸಿದವರು.
ನಿರ್ದೇಶಕರಾಗಿಯೇ ಇದ್ದ ಅವರು ನಿರ್ಮಾಣದ ಧೈರ್ಯ ಮಾಡಿ ಅಲ್ಲೂ ಗೆಲುವು ಕಂಡವರು. ನೋಡ ನೋಡುತ್ತಲೇ ಅವರು ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗಿ ನೋಡುವಂತಹ “ಕಬ್ಜ” ಎಂಬ ಸಿನಿಮಾವನ್ನು ಕಟ್ಟಿಕೊಟ್ಟವರು. ಬಹುಶಃ ಇಂತಹ ಅದ್ಧೂರಿ ಬಜೆಟ್ ಸಿನಿಮಾ ಕಟ್ಟಿಕೊಡೋಕೆ ಡಬಲ್ ಗುಂಡಿಗೆಯೇ ಬೇಕು. ಆರ್. ಚಂದ್ರು, ಕೋಟ್ಯಾಂತರ ರುಪಾಯಿಗಳ ಬಂಡವಾಳ ಹಾಕಿ ಕಬ್ಜ ಕಟ್ಟಿದರು. ಅಲ್ಲೂ ಒನ್ ಮ್ಯಾನ್ ಆರ್ಮಿಯಂತೆ ಕೆಲಸ ಮಾಡಿ ಗೆದ್ದು ತೋರಿಸಿದರು.
ಕಬ್ಜ ನೋಡಿದ ಭಾರತದ ಬಹುತೇಕ ಮಂದಿ ಹುಬ್ಬೇರಿಸಿದಂತೂ ನಿಜ. ಮೇಕಿಂಗ್ ಕುರಿತು ಕೊಂಡಾಡಿದ್ದು ನಿಜ. ಆದರೆ, ಇಂಡಸ್ಟ್ರಿಯಲ್ಲೇ ಇರುವ ಬೆರಳೆಣಿಕೆಯ ಕೆಲವು ಮಂದಿ ಮಾತ್ರ ವೈಯಕ್ತಿಕವಾಗಿ, ಹಳ್ಳಿ ಹೈದ ಏನೋ ಮಾಡಿಬಿಟ್ಟ. ಹೀಗೆ ಬಿಟ್ಟರೆ ಇನ್ನೇನೋ ಮಾಡಿ ಬಿಟ್ಟಾನು ಅನ್ನೋ ಲೆಕ್ಕಾಚಾರದಲ್ಲೇ ಇಲ್ಲ ಸಲ್ಲದ ಅಪಪ್ರಚಾರ ಮಾಡಿರಬಹುದು. ಕೆಲವು ಹಿತಾಸಕ್ತಿಗಳ ಷಡ್ಯಂತ್ರವಿರಬಹುದು. ಇವತ್ತಿಗೂ ಅಮೆಜಾನ್ ಪ್ರೈಮ್ನಲ್ಲಿ ಕಬ್ಜ ಐದು ಭಾಷೆಯಲ್ಲೂ ಇದೆ. ಸಿನಿಮಾ ನೋಡಿದವರು ಹಾಕಿರುವ ಒಳ್ಳೆಯ ಕಾಮೆಂಟ್ಗಳನ್ನು ನೋಡಿದರೆ, ನಿಜಕ್ಕೂ ಪ್ರೇಕ್ಷಕ ಗಪ್ಚುಪ್ ಆಗೋದು ನಿಜ.
ಒನ್ ಮ್ಯಾನ್ ಆರ್ಮಿಯಂತೆ ಕಾರ್ಯನಿರ್ವಹಿಸಿದ ಆರ್.ಚಂದ್ರು, ರೈಟರ್ ಆಗಿ, ಡೈರೆಕ್ಟರ್ ಅಗಿ ಪ್ರೊಡ್ಯುಸರ್ ಆಗಿ ಕಬ್ಜ ಮಾಡಿದರು. ಅದು ಅವರಿಗೆ ನಿರೀಕ್ಷೆಯ ಗೆಲುವಾಯ್ತು. ಒಂದು ಕನ್ನಡ ಚಿತ್ರವನ್ನು ಭಾರತೀಯ ಚಿತ್ರರಂಗ ಮಾತ್ರವಲ್ಲ, ಪ್ರಪಂಚಾದ್ಯಂತ ಕೊಂಡೊಯ್ದು ಸಿನಿಮಾದ ಕಂಟೆಂಟ್ ಹಾಗು ಮೇಕಿಂಗ್ ಬಗ್ಗೆ ಮಾತಾಡುವಂತೆ ಮಾಡಿದ್ದು ಹೆಗ್ಗಳಿಕೆಯೇ ಸರಿ. ಯಾವುದೋ ಒಂದು ದೊಡ್ಡ ಸಂಸ್ಥೆ ಒಂದು ನುರಿತ ತಂಡ ಕಟ್ಟಿಕೊಂಡು ಮಾಡಿದಾಗ ಸಿಗುವ ರಿಸಲ್ಟ್ ಸಹಜ. ಆದರೆ, ಆರ್.ಚಂದ್ರು ಒನ್ ಮ್ಯಾನ್ ಆರ್ಮಿಯಂತೆ ಕೆಲಸ ಮಾಡಿ ಚಿತ್ರರಂಗಕ್ಕೆ ಕಬ್ಜದಂತಹ ಸಿನಿಮಾ ಕೊಟ್ಟಿದ್ದು ಕನ್ನಡದ ದೊಡ್ಡ ಪ್ರಯತ್ನ. ಅವರೇ ಒಂದು ವೇದಿಕೆ ಮೇಲೆ ಹೇಳಿಕೊಂಡಂತೆ, ಕಬ್ಜ ಸಿನಿಮಾ ಮಾಡಿ ಆ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟಿದ್ದನ್ನು ಹೇಳಿಕೊಂಡಿದ್ದರು. ಯಾವ ನಿರ್ಮಾಪಕನೂ ಟ್ಯಾಕ್ಸ್ ಕಟ್ಟಿದ ಬಗ್ಗೆ ಗಟ್ಟಿದ್ವನಿಯಲ್ಲಿ ಹೇಳಿದ ಉದಾಹರಣೆ ಇಲ್ಲ. ಆರ್.ಚಂದ್ರು ಮಾತ್ರ ಕಬ್ಜ ಸಿನಿಮಾ ಮಾಡಿ ಟ್ಯಾಕ್ಸ್ ಕಟ್ಟಿದ್ದನ್ನು ಉಲ್ಲೇಖಿಸಿದ್ದರು. ಇನ್ನು, ಕಬ್ಜ ಸಿನಿಮಾದ ವ್ಯಾಪಾರ ವಹಿವಾಟು ಕೂಡ ಚೆನ್ನಾಗಿಯೇ ಆಗಿದ್ದರ ಬಗ್ಗೆಯೂ ಹೇಳಿಕೊಂಡಿದ್ದರು. ಕಬ್ಜ ಕೂಡ ಕನ್ನಡದ ಮಾರುಕಟ್ಟೆ ಯನ್ನು ಪಸರಿಸಿದ್ದು ಸುಳ್ಳಲ್ಲ. ಕನ್ನಡ ಮಾರುಕಟ್ಟೆಯ ಮಟ್ಟಿಗೆ ಹೇಳುವುದಾದರೆ ಇದು ಕೂಡ ಬಿಗ್ ಹಿಟ್ ಚಿತ್ರ. ಮುಂಬೈನ ಸಿನಿಮಾ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಮಾತಾಡುವಾಗ ಕೆಜಿಎಫ್ ಮತ್ತು ಕಬ್ಜ ಹೆಸರುಗಳು ಬರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಕಬ್ಜ ಕೂಡ ಜೋರು ಸದ್ದು ಮಾಡಿದ ಸಿನಿಮಾ. ಇಂಥದ್ದೊಂದು ಸಿನಿಮಾವನ್ನು ಒನ್ ಮ್ಯಾನ್ ಆರ್ಮಿಯಂತೆ ಮಾಡಿದ ಆರ್.ಚಂದ್ರು ಅವರನ್ನು ಪ್ರಶಂಸಿಸಲೇ ಬೇಕು. ಕೆಲವರು ಕಬ್ಜ ಬಗ್ಗೆ ಅಪಪ್ರಚಾರ ಮಾಡಿದ್ದು ನಿಜ. ಆದರೆ ಅವರಾರು ಪ್ರೇಕ್ಷಕರಲ್ಲ ಅನ್ನೋದು ನೆನಪಿರಲಿ. ಚಿತ್ರರಂಗದ ಕೆಲವರು ಮಾತಾಡಿದ್ದುಂಟು. ಅದು ಬಿಟ್ಟರೆ, ಅವರ ಪ್ರಯತ್ನವನ್ನು ಮೆಚ್ಚಿಕೊಂಡವರೇ ಹೆಚ್ಚು.ಸರ್
ಅನುಭವವೇ ಇದಕ್ಕೆಲ್ಲ ಕಾರಣ!
ಒಬ್ಬ ಸಾಮಾನ್ಯ ರೈತನ ಮಗ ಆರ್.ಚಂದ್ರು, ಐದು ಸಿನಿಮಾ ನಿರ್ಮಾಣ ಮಾಡಿ,12 ಸಿನಿಮಾ ನಿರ್ದೇಶನ ಮಾಡಿ ಈಗ ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಅನ್ನು ಅಪ್ಗ್ರೇಡ್ ಮಾಡಿ ಆರ್.ಸಿ. ಸ್ಟುಡಿಯೋಸ್ ಸಂಸ್ಥೆ ಶುರು ಮಾಡಿದ್ದಾರೆ. ಎಲ್ಲಿಯ ರೈತಾಪಿ ಮಗ ಎಲ್ಲಿಯ ಸಿಂಗಾಪುರ್ ಕಂಪೆನಿ! ಹೌದು, ಆರ್.ಚಂದ್ರು ಆನಂದ್ ಪಂಡಿತ್ ಎಂಬ ದಿಗ್ಗಜರನ್ನು ಜೊತೆಗೂಡಿಸಿಕೊಂಡು, ಸಿಂಗಾಪುರ್ ಕಂಪೆನಿಯ ಅಲಂಕಾರ್ ಪಾಂಡಿಯನ್ ಅವರನ್ನೂ ಜೊತೆ ಸೇರಿಸಿಕೊಂಡು ಇವರೊಂದಿಗೆ ಮಂಜುನಾಥ್ ಹೆಗ್ಗಡೆ ಎಂಬ ಉದ್ಯಮಿಯನ್ನು ಸೇರಿಸಿ ಈ ಮೂವರನ್ನು ಒಟ್ಟುಗೂಡಿಸಿಕೊಂಡು ಆರ್.ಸಿ.ಸ್ಟುಡಿಯೋಸ್ ಸಂಸ್ಥೆಯನ್ನು ಕನ್ನಡದಲ್ಲಿ ಕಟ್ಟಿದ್ದಾರೆ. ಕನ್ನಡ ಸಿನಿಮಾರಂಗದ ಬೆಳವಣಿಗೆ ಒಬ್ಬ ನಿರ್ದೇಶಕ, ಒಬ್ಬ ನಿರ್ಮಾಪಕನಿಂದ ಸಾಧ್ಯವಿಲ್ಲ. ಬಾಲಿವುಡ್ ಯಾಕೆ ಬೆಳೆದಿದೆ ಅಂದರೆ, ಅಲ್ಲಿ ಸ್ಟುಡಿಯೋಗಳು ತಲೆ ಎತ್ತಿವೆ. ಕರಣ್ ಜೋಹರ್, ಧರ್ಮ ಪ್ರೊಡಕ್ಷನ್ ಸೇರಿದಂತೆ ಹಲವಾರು ನಿರ್ಮಾಣ ಸಂಸ್ಥೆಗಳು ಹುಟ್ಟಿವೆ. ಆ ಮೂಲಕ ಹತ್ತಾರು ಬಿಗ್ ಬಜೆಟ್ ಚಿತ್ರಗಳು ನಿರ್ಮಾಣಗೊಂಡಿವೆ. ಅದರಿಂದಾಗಿ ಆ ಚಿತ್ರೋದ್ಯಮ ಬೆಳೆದು ನಿಂತಿದೆ. ಇನ್ನು ಸೌತ್ ಇಂಡಿಯಾದಲ್ಲಿ ರಾಮಾನಾಯ್ಡು ಸ್ಟುಡಿಯೋಸ್, ಅನ್ನಪೂರ್ಣ ಸ್ಟುಡಿಯೋಸ್, ಲೈಕಾ ಪ್ರೊಡಕ್ಷನ್ಸ್, ಪೀಪಲ್ಸ್ ಮೀಡಿಯಾ ಎಂಬ ದೊಡ್ಡ ನಿರ್ಮಾಣ ಸಂಸ್ಥೆಗಳು ಹುಟ್ಟಿದವು. ಕನ್ನಡದಲ್ಲಿ ಆ ರೀತಿಯ ನಿರ್ಮಾಣ ಸಂಸ್ಥೆಗಳು ಹುಟ್ಟಿಕೊಳ್ಳಲಿಲ್ಲ. ಹಾಗಾಗಿ ಕನ್ನಡ ಸಿನಿಮಾ ರಂಗದ ಬೆಳವಣಿಗೆ ಹಾಗೆ ಇತ್ತು.ಆ ಹೊತ್ತಲ್ಲಿ ಬಂದಿದ್ದೇ ಹೊಂಬಾಳೆ ಫಿಲಂಸ್. ಅದೊಂದು ದೊಡ್ಡ ಸಂಸ್ಥೆಯಾಗಿ ತಲೆ ಎತ್ತಿತು.
ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಆಗಿದ್ದೇ ತಡ, ಅದೇ ರೀತಿ ನಿರ್ಮಾಣ ಸ್ಟುಡಿಯೋ ಸಂಸ್ಥೆ ಕಟ್ಟಬೇಕೆಂಬ ಮಹದಾಸೆ ಹೊತ್ತು ಬಂದಿದ್ದೇ ಆರ್.ಚಂದ್ರು ಎಂಬ ಕನಸುಗಾರ. ಅದೇ ರೀತಿ ಬಿಗ್ ಬಜೆಟ್ ಸಿನಿಮಾ ಮಾಡಿ, ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತಾದರು. ಆ ಮೂಲಕ ಆರ್.ಚಂದ್ರು ಕನ್ನಡದ ಬಹುತೇಕ ಯುವ ನಿರ್ದೇಶಕರಿಗೆ, ಯುವ ಬರಹಗಾರರಿಗೆ ಸ್ಫೂರ್ತಿಯಾದರೆಂದರೆ ಅತಿಶಯೋಕ್ತಿಯಲ್ಲ. ಇಂತಹ ಆಶಾಭಾವನೆ ಇಟ್ಟುಕೊಂಡು ಸಂಸ್ಥೆ ಹುಟ್ಟುಹಾಕಿದಾಗ ಮಾತ್ರ ಈ ರೀತಿಯ ಪ್ರಯತ್ನ ಸಾಧ್ಯ. ಇದರ ಜೊತೆ ಅನುಭವ ಕೂಡ ಮುಖ್ಯ. ಅನುಭವ ಇದ್ದರೆ, ನಷ್ಟದ ಮಾತು ಕಡಿಮೆ. ಹೊಂಬಾಳೆ ಫಿಲಂಸ್, ರಾಕ್ಲೈನ್ ಪ್ರೊಡಕ್ಷನ್ಸ್ ಯಾಕೆ ನಷ್ಟ ಆಗಲ್ಲ. ಅವರೆಲ್ಲರೂ ಅನುಭವದಿಂದ ಮಾಡಿದವರು. ಆರ್.ಚಂದ್ರು ಕೂಡ ನೂರಾರು ಕೋಟಿ ಹಣ ಹಾಕಿ ಕಬ್ಜ ಮಾಡಿ ಗೆದ್ದವರು. ಈಗ ಅದೇ ಅನುಭವದ ಮೇಲೆ ದೊಡ್ಡ ಸಂಸ್ಥೆ ಕಟ್ಟಿ ಅಲ್ಲೂ ಗೆಲುವನ್ನು ಬೆನ್ನತ್ತಿದವರು. ಕೆಲವರು ಅನುಭವ ಇಲ್ಲದೆಯೇ ಸಿನಿಮಾ ನೋಡಿ ಸೋಲುತ್ತಾರೆ. ಎಲ್ಲೋ ಆ ನೋವನ್ನು ಹೇಳಿಕೊಳ್ಳುತ್ತಾರೆ. ಅದರಿಂದ ಇಂಡಸ್ಟ್ರಿ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ಎಲ್ಲವನ್ನೂ ಪ್ಲಾನ್ ಮಾಡಿಕೊಂಡು ಅನುಭವ ಪಡೆದು ಮಾಡಿದರೆ ಎಲ್ಲವೂ ಸುಲಭ. ಆ ನಿಟ್ಟಿನಲ್ಲಿ ಶ್ರೀ ಸಿದ್ದೇಶ್ವರ ಮೂವೀಸ್ ಬ್ಯಾನರ್ ಈಗ ಆರ್.ಸಿ. ಸ್ಟುಡಿಯೋಸ್ ಆಗಿ ಪರಿವರ್ತನೆಗೊಂಡು ಒಟ್ಟು ಆರು ಬಿಗ್ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಅನೌನ್ಸ್ ಮಾಡಿದೆ. ಜೊತೆಗೆ ಒಂದೊಂದಾಗಿಯೇ ನಿರ್ಮಿಸಲು ಹೋಮ್ ವರ್ಕ್ ನಡೆಸುತ್ತಿದೆ.
ಫಾದರ್ ಎಂಬ ಬಿಗಿದಪ್ಪುವ ಚಿತ್ರ:
ಸಿನಿಮಾ ಅನ್ನೋದಕ್ಕೆ ದೊಡ್ಡ ಶಕ್ತಿ ಇದೆ. ಅಳು-ನಗುವಿನ ಸಂಕೇತವಿದ್ದರೂ ಅಲ್ಲೆಲ್ಲೋ ಒಂದು ಕಡೆ ಆಪ್ತವೆನಿಸೋ ಅಂಶಗಳು ನೋಡುಗರನ್ನು ಬಿಗಿದಪ್ಪುತ್ತವೆ. ಈ ಫಾದರ್ ಸಿನಿಮಾ ಕೂಡ ಎದೆ ಭಾರವೆನಿಸುವ ಚಿತ್ರ. ಮನಸ್ಸಿಗೆ ಖುಷಿ ಕೊಡುವ, ಕಣ್ಣಲ್ಲಿ ಆನಂದಭಾಷ್ಪ ತರುವ ಮತ್ತೆ ಮತ್ತೆ ಕಾಡುವ, ಏನೋ ಕಳೆದುಕೊಂಡ ಸಂಕಟ, ಇನ್ನೇನ್ನನ್ನೋ ಪಡೆಯಬೇಕೆಂಬ ಹಂಬಲ, ಮತ್ತೇನೋ ಉಳಿಸಿಕೊಳ್ಳಬೇಕೆಂಬ ಹಠ ಇವೆಲ್ಲದರ ಸಮ್ಮಿಶ್ರಣವೇ ಫಾದರ್.
ಇಲ್ಲಿ ನೋವಿದೆ, ನಲವಿದೆ. ಬಾಂಧವ್ಯದ ಹೂರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವದ ತಿರುಳಿದೆ. ಪ್ರತಿಯೊಬ್ಬರ ಮನಸ್ಸಿಗೂ ನಾಟುವ ಅಂಶವಿದೆ. ಕಣ್ಣಿಗೆ ಕಟ್ಟುವ ಚಿತ್ರಣವೂ ಇರಲಿದೆ. ಫಾದರ್ ಪ್ರತಿಯೊಬ್ಬರ ಮನಸ್ಸನ್ನು ಹಗುರಾಗಿಸೋ ಚಿತ್ರವಾದರೂ, ಏನೋ ಒಂದು ಮಿಸ್ ಆಯ್ತು ಅನ್ನೋ ಭಾವನೆಯ ಚಿತ್ರ ಇದಾಗಲಿದೆ. ಆರ್.ಸಿ. ಸ್ಟುಡಿಯೋದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಸ್ಟುಡಿಯೋ ಮುಖ್ಯಸ್ಥ ಆರ್.ಚಂದ್ರ ಒಂದೊಳ್ಳೆಯ ಕಂಟೆಂಟ್ ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, ಜಗತ್ತಿನಲ್ಲಿ ಅಪ್ಪನ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪ ಅನ್ನೋದು ಆಕಾಶಕ್ಕಿಂತಲೂ ಮಿಗಿಲು. ಅಪ್ಪನ ಬಿಸಿಯುಸಿರು, ಅಪ್ಪನ ಅಪ್ಪುಗೆ, ಅಪ್ಪನ ನೋವು, ಅಪ್ಪನ ಬೆವರು, ಅಪ್ಪನ ಕಾತರ, ಆತುರ, ಚಡಪಡಿಕೆ, ಆಸೆ, ಜವಾಬ್ದಾರಿ ಇತ್ಯಾದಿಗಳ ರೂಪವೇ ಈ ಫಾದರ್ ಅಂತಂದುಕೊಂಡರೂ ಅದಕ್ಕಿಂತಲೂ ಮಿಗಿಲಾಗಿದ್ದು ಈ ಫಾದರ್ ಒಳಗಿದೆ. ಇದು ಎಲ್ಲರಿಗೂ ಇಷ್ಟವಾಗುವ ಚಿತ್ರವಾಗುತ್ತೆ ಎಂಬ ಭರವಸೆ ಆರ್ ಸಿ ಸ್ಟುಡಿಯೋದ್ದು.
ಇನ್ನು ಚಂದ್ರು ಕಂಟೆಂಟ್ಗೆ ಬೆಲೆ ಕೊಡ್ತಾರೆ. ಆ ಕಾರಣಕ್ಕೆ ಬಿಗ್ ಬಜೆಟ್ ಆಗಿದ್ದರೂ, ನಿರ್ದೇಶಕ ರಾಜ ಮೋಹನ್ ಎಂಬುವವರನ್ನು ಕನ್ನಡಕ್ಕೆ ಕರೆದು ಅವಕಾಶ ಕೊಡುತ್ತಿದ್ದಾರೆ. ಆ ನಿರ್ದೇಶಕನಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಅವಕಾಶ ಕೊಟ್ಟ ಚಂದ್ರು ಕೂಡ ಸಿನಿಮಾದ ಗಾಡ್ ಫಾದರ್ ಇದ್ದಂತೆ. ಈ ಮಾತು ಅತಿಶಯೋಕ್ತಿಯಲ್ಲ. ಅದೇನೆ ಇರಲಿ, ಆರ್.ಸಿ.ಸ್ಟುಡಿಯೋ ಇಟ್ಟಿರುವ ಮಹತ್ತರ ಹೆಜ್ಜೆಗೆ ಎಲ್ಲರ ಮೆಚ್ಚುಗೆ ಇರಲಿ. ಇದು ಗ್ಲೋಬಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂಬ ಆಶಯ ನಮ್ಮದು.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಸಾಲಿಗೆ ಆರ್ ಸಿ ಸ್ಟುಡಿಯೋ :
ಆರ್ ಸಿ. ಸ್ಟುಡಿಯೋ ಸಂಸ್ಥೆ ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸುವ ಗುರಿ ಹೊಂದಿದೆ. ಹೌದು, ಅದು ಮೊದಲು ಆಯ್ಕೆ ಮಾಡಿಕೊಂಡ ಪ್ಯಾನ್ ಇಂಡಿಯಾ ಸಿನಿಮಾ “ಫಾದರ್”. ಜಗತ್ತಿನ ಹುಟ್ಟಿಗೆ ತಂದೆ ಕಾರಣ. ಅಂಥದ್ದೊಂದು ಯೋಚನೆ ಇಟ್ಟುಕೊಂಡೇ ಆರ್ ಸಿ ಸ್ಟುಡಿಯೋಸ್ ಫಾದರ್ ಕೈಗೆತ್ತಿಕೊಂಡಿದೆ. ಬಹುಭಾಷೆಯ ನಟ ಪ್ರಕಾಶ್ ರೈ, ಡಾರ್ಲಿಂಗ್ ಕೃಷ್ಣ, ತೆಲುಗಿನ ಸುನೀಲ್ ಸೇರಿದಂತೆ ಅನೇಕ ಪರಭಾಷೆ ನಟ, ನಟಿಯರ ದಂಡೇ ಈ ಚಿತ್ರದಲ್ಲಿರಲಿದೆ. ಏಪ್ರಿಲ್ ೨೭ರಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಂದಹಾಗೆ, ಚಂದ್ರು ಏನೇ ಮಾಡಿದರೂ ಅದು ಬಿಗ್ ಸ್ಕೇಲ್ನಲ್ಲಿರುತ್ತೆ. ಶಾಸ್ತ್ರೋಕ್ತವಾಗಿ, ಸಾಂಪ್ರದಾಯಿಕವಾಗಿ ಮಾಡುತ್ತಾರೆ. ಯಾವುದೇ ಸಿನಿಮಾ ಮುಹೂರ್ತ ಮಾಡಿದರೂ ಅಲ್ಲಿ ಪ್ರೀತಿ, ಭಕ್ತಿ, ಶ್ರದ್ಧೆ ಇರುತ್ತೆ. ಜೊತೆಗೆ ಅದು ದೊಡ್ಡ ಮಟ್ಟದಲ್ಲೇ ಇರುತ್ತೆ. ಅದೇ ಸಂಪ್ರದಾಯ ಈ ಫಾದರ್ ನಲ್ಲೂ ಮುಂದುವರೆದಿದೆ. ಈ ಕಾರಣಕ್ಕಾಗಿ ಚಂದ್ರು ಇಷ್ಟವಾಗುತ್ತಾರೆ.
ಫಾದರ್ ಅನ್ನೋದೇ ಒಂದು ಧೈರ್ಯ. ಅಪ್ಪ ಅನ್ನುವಾತ ಜೊತೆಗಿದ್ದರೆ ಸಿಗುವ ಖುಷಿ, ನೆಮ್ಮದಿ ಮತ್ತು ಧೈರ್ಯನೇ ಬೇರೆ. ಹಾಗಾಗಿ ಫಾದರ್ ಜೊತೆಗಿದ್ದರೆ ಗೆಲುವು ಸರಳ ಎಂಬ ಅಪಾರ ನಂಬಿಕೆ ಚಂದ್ರು ಅವರದ್ದು. ಈಗಾಗಲೇ ಚಂದ್ರು ಅದನ್ನು ಸಾಬೀತುಪಡಿಸಿದ್ದಾರೆ ಕೂಡ. ಗೆಲ್ಲಬೇಕು ಅಂತ ಹೊರಟಾಗ ಗೆದ್ದು ತೋರಿಸಿದ ಉದಾಹರಣೆ ಕಣ್ಣಮುಂದೆಯೇ ಇದೆ. ತೆಲುಗು ಸಿನಿಮಾ ಮಾಡ್ತೀನಿ ಅಂದ್ರು ಮಾಡಿ ಗೆದ್ದರು. ಸ್ಫೂರ್ತಿಯಿಂದ ಕಬ್ಜ ಮಾಡಿ ತೋರಿಸ್ತೀನಿ ಅಂದ್ರು ಅಲ್ಲೂ ಗೆದ್ದರು. ಈಗ ಒಂದಲ್ಲ, ಎರಡಲ್ಲ ಆರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಆರ್.ಸಿ. ಸ್ಟುಡಿಯೋಸ್ ಮೂಲಕ ಕೈಗೆತ್ತಿಕೊಂಡಿದ್ದಾರೆ.
ಫಾದರ್ ಎಲ್ಲರ ಹೃದಯ ಮುಟ್ಟುತ್ತೆ. ಅದನ್ನು ಮುಟ್ಟಿಸುವ ಪ್ರಯತ್ನದಲ್ಲಿ ತಂಡ ಕಟ್ಟಿಕೊಂಡು ಆ ತಯಾರಿಯಲ್ಲೂ ಇದ್ದಾರೆ. ನಿಜಕ್ಕೂ ಚಂದ್ರು ಅವರ ಧೈರ್ಯಕ್ಕೆ ಮೆಚ್ಚಬೇಕು. ಆರು ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೊಡುವ ಗುರಿ ಇದೆ. ಕನ್ನಡದಲ್ಲಿರುವ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳ ಸಾಲಿಗೆ ಆರ್.ಸಿ. ಸ್ಟುಡಿಯೋ ಕೂಡ ತಲೆ ಎತ್ತಿ ನಿಲ್ಲಲಿದೆ. ಇಂತಹ ಸಂಸ್ಥೆಗೆ ಕನ್ನಡ ಚಿತ್ರರಂಗ, ಕನ್ನಡಿಗರು, ಮುಖ್ಯವಾಗಿ ಮಾಧ್ಯಮ ಮನಸಾರೆ ಹಾರೈಸಬೇಕು. ಬೆಂಬಲಿಸಿದರೆ, ನಿಜಕ್ಕೂ ಇನ್ನಷ್ಟು ಒಳ್ಳೆಯ ಬೆಳವಣಿಗೆಗಳು ಕಾಣಬಹುದು.
ಏಪ್ರಿಲ್ 27 ಕ್ಕೆ ಅದ್ಧೂರಿ ಮುಹೂರ್ತ. ಆರ್.ಸಿ. ಸ್ಟುಡಿಯೋಸ್ ಸಿನಿಮಾರಂಗದ ಗಣ್ಯರು, ಸಿನಿ ಪ್ರೇಮಿಗಳನ್ನು ಪ್ರೀತಿಯಿಂದಲೇ ಆಹ್ವಾನಿಸುತ್ತಿದೆ.
Be the first to comment