ಹೊಸ ಪ್ರತಿಭೆಗಳ ‘ಪ್ರೇಮಂ ಮಧುರಂ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆ ಸಮಾರಂಭ ನಡೆಯಿತು. ನಿರ್ದೇಶಕ ಹಾಗೂ ನಟ ಗಾಂಧಿ ಎ.ಬಿ. ಮಾತನಾಡಿ, “ಈ ಸಿನಿಮಾ ಯುವಜನತೆಗೆ ಕನೆಕ್ಟ್ ಆಗುತ್ತದೆ. ಪ್ರೀತಿ ಎಲ್ಲರ ಜೀವನದಲ್ಲಿ ಯಾವುದೋ ಹಂತದಲ್ಲಿ ಯಶಸ್ವಿಯಾಗಿರುತ್ತದೆ ಅಥವಾ ಸೋತಿರುತ್ತದೆ. ಅದನ್ನೇ ಮೂವರು ಹಂತಗಳಲ್ಲಿ ತೋರಿಸಲಾಗಿದೆ. ನಾನು ಸ್ಕೂಲ್ ಮತ್ತು ಕಾಲೇಜ್ ದಿನಗಳಲ್ಲಿ ಅನುಭವಿಸಿದ ಅಂಶಗಳನ್ನು ಸಿನಿಮಾದಲ್ಲಿ ಬೆರೆಸಿದ್ದೇನೆ” ಎಂದು ಹೇಳಿದರು.
ನಿರ್ಮಾಪಕ ಅರಗೊಂಡ ಶೇಖರ್ ರೆಡ್ಡಿ , ”ನನ್ನ ಹುಟ್ಟೂರು ತಿರುಪತಿ. ಬದುಕು ಕಂಡಿದ್ದು ಬೆಂಗಳೂರಿನಲ್ಲಿ. ಈ ನಗರಕ್ಕೆ ನಾನು ಋಣಿಯಾಗಿದ್ದೇನೆ. ಕನಿಷ್ಠ 10 ಜನ ಯುವಕರಿಗೆ ಬದುಕಿನ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ. ನಾನು ಮೆಗಾಸ್ಟಾರ್ ಚಿರಂಜೀವಿಯ ಅಭಿಮಾನಿ. ಅವರ ಮಾತಿನಂತೆ ‘ಮಾತು ಕೊಡುವ ಮುಂಚೆ ನೀನು ಯಜಮಾನ. ಕೊಟ್ಟ ನಂತರ ಗುಲಾಮ’ ಎನ್ನುವ ತತ್ವದಂತೆ ನಾನು ನಡೆದುಕೊಂಡಿದ್ದೇನೆ’ ಎಂದು ಹೇಳಿದರು.
‘ರೂಬಿ ಕ್ರಿಯೇಶನ್ಸ್’ ಬ್ಯಾನರ್ನಲ್ಲಿ ಅರಗೊಂಡ ಶೇಖರ್ ರೆಡ್ಡಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಗಾಂಧಿ ಎ.ಬಿ. ಅವರು ಕಥೆ, ನಿರ್ದೇಶನ ಮಾಡಿ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐಶ್ವರ್ಯಾ ದಿನೇಶ್ ಮತ್ತು ಅನುಷಾ ಜೈನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಿಹಿಕಹಿ ಚಂದ್ರು, ಲಪಂಗ ರಾಜ, ರಾಜೇಶ್ವರಿ, ಅನೂಪ್ ಅಗಸ್ತ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಂಗೀತ ವಿಶಾಲ್ ಆಲಾಪ, ಛಾಯಾಗ್ರಹಣ ಮಂಜುನಾಥ ಹೆಗಡೆ, ಸಂಕಲನ ಸಂಜೀವ್ ಜಾಗಿರ್ದಾರ್ ನಿರ್ವಹಿಸಿದ್ದಾರೆ. ಚಿತ್ರದ ಶೂಟಿಂಗ್ ಬೆಂಗಳೂರು, ಬೈಂದೂರು, ಮಂಗಳೂರು, ಉಡುಪಿ, ಕಾಲ್ತೋಡು, ಮಲ್ಪೆ ಸುತ್ತಮುತ್ತ ನಡೆದಿದೆ.





Be the first to comment