ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿ 39.05 ಕೋಟಿ ರೂ. ಗಳಿಕೆ ದಾಖಲಿಸಿದೆ.
ಸೆಪ್ಟೆಂಬರ್ 25ರಂದು ಕೇವಲ 60 ಪ್ರದರ್ಶನಗಳೊಂದಿಗೆ ಆರಂಭವಾದ ‘ಪ್ರೇಮದ ಊರಲಿ’ ಸಿನಿಮಾ ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ಈ ಚಿತ್ರ ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುತ್ತಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಚಿತ್ರದಲ್ಲಿ ನಾಯಕ ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು, ತಪಸ್ವಿನಿ ಪೂಣಚ್ಚ ತಮ್ಮ ಸಹಜ ನಟನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ಕೌಟುಂಬಿಕ ಬಿಕ್ಕಟ್ಟಿನ ಭಾವನಾತ್ಮಕ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿಯ ಕಥೆಯಾಗಿದೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಸಿನಿಮಾ, ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮನುಷ್ಯತ್ವ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಅದ್ಭುತವಾಗಿ ತೆರೆದಿಟ್ಟಿದೆ.
ಸುನಾದ್ ಗೌತಮ್ ಅವರ ಸುಮಧುರ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ರಾಜ್ಕಾಂತ್ ಅವರ ಕ್ಯಾಮೆರಾ ಕೈಚಳಕ ಚಿತ್ರದ ಜೀವಾಳವಾಗಿದೆ.
—–





Be the first to comment