ಮೊನಾಲಿಸಾ ಪತಿ ವಿರುದ್ಧ ಪೋಕ್ಸೋ ಪ್ರಕರಣ

ಕುಂಭಮೇಳದ ವೇಳೆ   ವೈರಲ್ ಆಗಿದ್ದ ಮೊನಾಲಿಸಾ ಮದುವೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮೊನಾಲಿಸಾ, ಪ್ರಿಯಕರ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯ ಸಮಯದಲ್ಲಿ ಮೊನಾಲಿಸಾ ಅಪ್ರಾಪ್ತೆಯಾಗಿದ್ದಳು ಎಂಬ ಆರೋಪದ  ಹಿನ್ನೆಲೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಮದುವೆಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿದ್ದವು.  ಈ ಹಿನ್ನೆಲೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ತನಿಖೆ ಆರಂಭಿಸಿತು. ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಮೊನಾಲಿಸಾ ಮದುವೆ ವೇಳೆ 18 ವರ್ಷ ಪೂರೈಸಿರಲಿಲ್ಲ ಎಂಬುದು ತಿಳಿದು ಬಂದಿದೆ.

ಆಸ್ಪತ್ರೆಯ ದಾಖಲೆಗಳ ಪ್ರಕಾರ ಮೊನಾಲಿಸಾ ಅವರು 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾರೆ.  ಮದುವೆ ಸಮಯದಲ್ಲಿ ಅವರಿಗೆ ಸುಮಾರು 16 ವರ್ಷ ವಯಸ್ಸಾಗಿತ್ತು. ಕೇರಳದಲ್ಲಿ ಮದುವೆಯಾಗುವ ವೇಳೆ, ವಯಸ್ಸು 18 ವರ್ಷ ತುಂಬಿದ ನಕಲಿ ಜನನ ಪ್ರಮಾಣಪತ್ರ ಬಳಕೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ದಾಖಲೆಗಳ ಆಧಾರದ ಮೇಲೆ ದೇವಸ್ಥಾನದಲ್ಲಿ ವಿವಾಹ ನೆರವೇರಿಸಲಾಗಿದೆ. ನಂತರ ಸ್ಥಳೀಯ ಪಂಚಾಯತ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದೆ. ಏಪ್ರಿಲ್ 22ರಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮೊನಾಲಿಸಾ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ.

ತನಿಖೆಯ ಆಧಾರದ ಮೇಲೆ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಇತರ  ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ  ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!