Ondu Sarala Prema Kathe Review : ಸರಳವಲ್ಲ ; ಇದು ವಿರಳ ಪ್ರೇಮಕಥೆ!

ಚಿತ್ರ: ಒಂದು ಸರಳ ಪ್ರೇಮ ಕಥೆ

ನಿರ್ದೇಶಕ: ಸಿಂಪಲ್ ಸುನಿ
ತಾರಾಗಣ: ವಿನಯ್ ರಾಜ್ ಕುಮಾರ್, ಮಲ್ಲಿಕಾ ಸಿಂಗ್, ಸ್ವಾದಿಷ್ಟ ಕೃಷ್ಣನ್, ರಾಜೇಶ್ ನಟರಂಗ ಇತರರು
ರೇಟಿಂಗ್: 4

ಸಿನಿಮಾದ ಹೆಸರು ‘ ಒಂದು ಸರಳ ಪ್ರೇಮಕಥೆ’ ಎಂದಿದ್ದರೂ ಹಲವು ಟ್ವಿಸ್ಟ್ ಹೊಂದಿರುವ ಇದು ಒಂದು ವಿರಳ ಪ್ರೇಮ ಕಥೆ ಆಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಚಿತ್ರ ಯಶಸ್ವಿಯಾಗಿದೆ.

ನಿರ್ದೇಶಕ ಸಿಂಪಲ್ ಸುನಿ, ಹಾಸ್ಯ, ಸೆಂಟಿಮೆಂಟ್, ಚುರುಕಾದ ಸಂಭಾಷಣೆ ಮೂಲಕ ಈ ಹಿಂದಿನಂತೆ ಈ ಸಿನಿಮಾವನ್ನು ಕಟ್ಟಿಕೊಡುವ ಯತ್ನವನ್ನು ಮಾಡಿದ್ದಾರೆ. ಪ್ರೇಕ್ಷಕರನ್ನು ರಂಜಿಸುವ ಯತ್ನದಲ್ಲಿ ಒಂದು ಸರಳ ಪ್ರೇಮ ಕಥೆ ಗೆದ್ದಿದೆ.

ಸಿನಿಮಾದ ಲವ್ ಸ್ಟೋರಿ ಶೀರ್ಷಿಕೆಯಂತೆ ಸರಳವಾಗಿಲ್ಲ. ಇಲ್ಲಿ ಒಮ್ಮೆಲೆ ಟ್ವಿಸ್ಟ್ ಗಳು ಬರುತ್ತವೆ. ಸಿನಿಮಾದ ನಾಯಕ ಅತಿಶಯ್ ಗೆ ದೊಡ್ಡ ಸಂಗೀತ ನಿರ್ದೇಶಕ ಆಗುವ ಜೊತೆಗೆ ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗಬೇಕು ಎನ್ನುವುದು ದೊಡ್ಡ ಕನಸು. ಆದರೆ ಈ ಕನಸುಗಳು ಅಷ್ಟು ಸುಲಭವಾಗಿ ಈಡೇರುವುದಿಲ್ಲ. ನಾಯಕನ ಕನಸು ಏನಾಗುತ್ತದೆ ಎನ್ನುವುದಕ್ಕೆ ಸಿನಿಮಾವನ್ನು ನೋಡಬೇಕು..

ಅತಿಶಯ್ ಪಾತ್ರದ ಮೂಲಕ ವಿನಯ್ ರಾಜಕುಮಾರ್ ಅವರು ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಹುಡುಗನ ಪಾತ್ರದಲ್ಲಿ ನೋಡುಗರಿಗೆ ಇಷ್ಟ ಆಗುವಂತೆ ನಟಿಸಿದ್ದಾರೆ. ನಟನೆಯಲ್ಲಿ ಅವರು ಸಾಕಷ್ಟು ಮಾಗಿದಂತೆ ಕಂಡುಬರುತ್ತಾರೆ. ಸ್ವಾದಿಷ್ಟಗೆ ಚಿತ್ರದಲ್ಲಿ ನಟಿಸಲು ಸಾಕಷ್ಟು ಅವಕಾಶ ಸಿಕ್ಕಿದೆ. ಇನ್ನೋರ್ವ ನಟಿ ಮಲ್ಲಿಕಾ ಸಿಂಗ್ ಅವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಇಷ್ಟವಾಗುತ್ತಾರೆ.

ರಾಜೇಶ್ ನಟರಂಗ ಅವರು ತೂಕದ ಅಭಿನಯ ಮಾಡಿದ್ದಾರೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಹಾಗೂ ಶ್ವೇತಾ ಶ್ರೀವಾಸ್ತವ್ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಆಗಿ ಕಾಣಿಸಿಕೊಂಡಿರುವ ಸಾಧು ಕೋಕಿಲ ಗಮನ ಸೆಳೆಯುತ್ತಾರೆ.

ಸಿಂಪಲ್ ಸುನಿ ತ್ರಿಕೋನ ಪ್ರೇಮ ಕಥೆಯನ್ನು ಚುರುಕು ಸಂಭಾಷಣೆ, ಭಾವುಕತೆಯ ಮೂಲಕ ಕಟ್ಟಿಕೊಡುವ ಯತ್ನ ಮಾಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!