ನಾವು ತುಂಬಾ ಒಳ್ಳೆಯವರು

‘ನಾವು ತುಂಬಾ ಒಳ್ಳೆಯವರು’ ಚಿತ್ರದ ಟ್ರೇಲರ್‌ ಬಿಡುಗಡೆ

ಕಳೆದ ವರ್ಷ ಪ್ರೇಕ್ಷಕರ ಮನಗೆದ್ದು ಗಮನಾರ್ಹ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್ ಮಲ್ಲಿ ಸಾರಥ್ಯದ ಈ ಚಿತ್ರತಂಡ ಮತ್ತೊಮ್ಮೆ ಉತ್ತರ ಕರ್ನಾಟಕದ ಅಪ್ಪಟ ಜವಾರಿ ಸೊಗಡಿನ ಕಥೆಯನ್ನು ಹೊತ್ತು ತರುತ್ತಿದ್ದು, ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂದು ಹೆಸರಿಡಲಾಗಿದೆ. ಬಹುತೇಕ ‘ಪಪ್ಪಿ’ ಸಿನಿಮಾದ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿದಿರುವುದು ವಿಶೇಷ.

ಶೀರ್ಷಿಕೆಯೇ ಸೂಚಿಸುವಂತೆ ‘ನಾವು ತುಂಬಾ ಒಳ್ಳೆಯವರು’ ಸಂಪೂರ್ಣ ಹಾಸ್ಯ ಪ್ರಧಾನ ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿದೆ. ಹಿಂದಿನ ‘ಪಪ್ಪಿ’ ಚಿತ್ರಕ್ಕಿಂತ ತೀರಾ ಭಿನ್ನವಾಗಿರುವ ಈ ಕಥೆ ಕುಟುಂಬ ಸಮೇತ ನೋಡುವ ಪ್ರೇಕ್ಷಕರಿಗೆ ಹೇಳಿಮಾಡಿಸಿದಂತಿದೆ. ಉತ್ತರ ಕರ್ನಾಟಕದ ಜನಜೀವನ, ಸಂಸ್ಕೃತಿ ಮತ್ತು ಆಡುಭಾಷೆಯನ್ನು ತೆರೆಯ ಮೇಲೆ ತರುವುದು ನಿರ್ದೇಶಕ ಆಯುಷ್ ಮಲ್ಲಿ ಅವರ ಆಶಯವಾಗಿದ್ದು, ಈ ಚಿತ್ರದಲ್ಲೂ ಅದು ಮುಂದುವರಿದಿದೆ. ಒಂದು ವಠಾರದ ಸುತ್ತ ಹೆಣೆಯಲಾದ ಜನಸಾಮಾನ್ಯರ ಬದುಕಿನ ಕಥೆಯ ಜೊತೆಗೆ, ಹೆಳವ ಸಮುದಾಯದ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಮಹತ್ವದ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ.

ನಾವು ತುಂಬಾ ಒಳ್ಳೆಯವರು

ಚಿತ್ರತಂಡವು ನೈಜತೆಯ ಸ್ಪರ್ಶ ನೀಡಲು ಉತ್ತರ ಕರ್ನಾಟಕದ ಸುಂದರ ತಾಣಗಳಲ್ಲೇ ಚಿತ್ರೀಕರಣ ನಡೆಸಿದೆ. ವಿಜಯಪುರ, ತಾವರಗೇರಾ ಸಮೀಪದ ಮೇನದಾಳ್ ಹಾಗೂ ಗದಗ ಸೇರಿದಂತೆ ವಿವಿಧ ಪರಿಸರಗಳಲ್ಲಿ ಸತತ 52 ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜತೆಗೆ ಆಯುಷ್ ಮಲ್ಲಿ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ‘ಪಪ್ಪಿ’ ಚಿತ್ರದಲ್ಲಿ ಗಮನ ಸೆಳೆದಿದ್ದ ಜಗದೀಶ್ ಕೊಪ್ಪಳ, ಆದಿ, ದುರುಗಪ್ಪ, ರೇಣುಕಾ ಅವರೊಂದಿಗೆ ರಂಗಭೂಮಿ ಕಲಾವಿದರಾದ ಸಹನಾ ಪ್ರಕಾಶ್, ಸಂಜನಾ ಮೂಲೆ, ಸಾಹಿತಿ, ಅಂದಪ್ಪ ಸಂಕನೂರು, ಕುಮಾರ್ ಮತ್ತು ನೇತ್ರಾ ಅರಳಹಳ್ಳಿ ತಾರಾಗಣದಲ್ಲಿದ್ದಾರೆ.

ಇತ್ತೀಚೆಗಷ್ಟೇ (ಅ.23) ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ವರ್ಷಾಂತ್ಯಕ್ಕೆ, ಅಂದರೆ ಮುಂಬರುವ ಡಿಸೆಂಬರ್‌ನಲ್ಲಿ ‘ನಾವು ತುಂಬಾ ಒಳ್ಳೆಯವರು’ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಕಲ ಸಿದ್ಧತೆಗಳು ನಡೆದಿವೆ.

ನಾವು ತುಂಬಾ ಒಳ್ಳೆಯವರು

Be the first to comment

Leave a Reply

Your email address will not be published. Required fields are marked *

Translate »
error: Content is protected !!