ಚಿತ್ರ: ಲವ್ ಮಾಕ್ಟೇಲ್ 3
ನಿರ್ದೇಶಕ: ಡಾರ್ಲಿಂಗ್ ಕೃಷ್ಣ
ನಿರ್ಮಾಪಕ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಬೇಬಿ ಸಂವೃತಾ, ಶ್ವೇತಾ ಪ್ರಸಾದ್ ಮುಂತಾದವರು…
ರೇಟಿಂಗ್ : 4/5
ಲವ್ ಮಾಕ್ಟೇಲ್ ಎನ್ನುವ ಚಿತ್ರದ ಬಳಿಕ ನಟ, ನಿರ್ದೇಶಕ ಕೃಷ್ಣ ಮೂರನೇ ಭಾಗವನ್ನು ಹೊರತಂದಿದ್ದಾರೆ. ಸಾಮಾನ್ಯವಾಗಿ ಗೆದ್ದ ಸೂತ್ರವನ್ನೇ ಮತ್ತೆ ಸಿದ್ಧಪಡಿಸುವವರೇ ಹೆಚ್ಚು. ಆದರೆ ಒಂದೇ ಚಿತ್ರದ ಮೂರನೇ ಭಾಗ ತರುವಾಗ ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿ ನೀಡಿ ಮನಗೆಲ್ಲುವ ಪ್ರತಿಭೆ ಕೃಷ್ಣರದ್ದಾಗಿದೆ.
ಮೊದಲ ಭಾಗದಲ್ಲಿ ನಿಧಿ ಪ್ರೀತಿಗೆ ಮರುಳಾಗಿದ್ದ ಆದಿ ಎರಡನೇ ಭಾಗದಲ್ಲಿ ಆಕೆಯನ್ನು ಕಳೆದುಕೊಂಡಿದ್ದರು. ಇದೀಗ ಮೂರನೇ ಭಾಗದಲ್ಲಿ ಮತ್ತೆ ನಿಧಿಯ ಆಗಮನವಾಗಿದೆ. ಆದರೆ ಈ ಬಾರಿ ನಿಧಿ ಮಗಳಾಗಿ ಬಂದಿದ್ದಾರೆ. ಬಾಲನಟಿ ಸಂವೃತಾ ಮತ್ತು ದತ್ತು ತಂದೆ ಆದಿಯಾಗಿ ಕೃಷ್ಣ ನಟನೆಯೇ ಈ ಚಿತ್ರದ ಹೈಲೈಟ್.
ಚಿತ್ರದ ಮೊದಲಾರ್ಧ ಭಾಗ ಮಕ್ಕಳಾಟದೊಂದಿಗೆ ಶುರುವಾಗುತ್ತದೆ. ಆದರೆ ಮಧ್ಯಂತರ ತಲುಪುವಷ್ಟರಲ್ಲಿ ತುಂಬ ಗಂಭೀರತೆ ಪಡೆಯುತ್ತದೆ. ಅದಕ್ಕೆ ಕಾರಣವೇನು ಎನ್ನುವ ಕುತೂಹಲ ಹಾಗೆಯೇ ಇದ್ದರೆ ಚಂದ.
ಲವ್ ಮಾಕ್ಟೇಲ್ ಚಿತ್ರದ ಈ 3ನೇ ಭಾಗದಲ್ಲಿ ಕೃಷ್ಣ ಮಾತ್ರವಲ್ಲ ಈ ಹಿಂದಿನ ಭಾಗಗಳ ಒಂದಷ್ಟು ಪಾತ್ರಗಳು ಕೂಡ ಮರಳಿವೆ. ಆದಿಯ ಸ್ನೇಹಿತ ವಿಜಯ್ ಪಾತ್ರದಲ್ಲಿ ನಟಿಸಿರುವ ಅಭಿಲಾಷ್ ಕಾಮಿಡಿ ಇಲ್ಲಿ ಕೂಡ ಇದೆ. ಅದೇ ರೀತಿ ಮಿಲನಾ ಕೂಡ ಹಾಡೊಂದರಲ್ಲಿ ಬಂದು ಹೋಗುತ್ತಾರೆ. ಅಮೃತಾ ಅಯ್ಯಂಗಾರ್ ಕೂಡ ಅರಂಭದಲ್ಲೇ ಎಂಟ್ರಿಯಾಗುತ್ತಾರೆ. ಇವರೆಲ್ಲರ ಜತೆ ಜಗ್ಗ ಮಮ್ಮಿ ಎನ್ನುವ ಹೊಸ ಪಾತ್ರವೊಂದರ ಎಂಟ್ರಿಯಾಗಿದೆ. ಈ ಕಲಾವಿದನ ಭಾಷಾ ಸೊಗಡು ಮತ್ತು ನೈಜ ನಟನೆ ಮನ ಸೆಳೆಯುವಂತಿದೆ. ರೇಖಾ ಕೂಡ್ಲಿಗಿ ಅವರ ಪಾತ್ರ ಕೂಡ ಪ್ರಾಮುಖ್ಯತೆ ಪಡೆದಿದೆ.
ಚಿತ್ರದ ಕ್ಕೈಮ್ಯಾಕ್ಸ್ ಭಾಗವು ನ್ಯಾಯಾಲಯದಲ್ಲಿ ನಡೆಯುತ್ತದೆ. ವಕೀಲರಾಗಿ ದಿಲೀಪ್ ರಾಜ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ವಾದ ಪ್ರತಿವಾದವನ್ನು ಚೆನ್ನಾಗಿ ತೋರಿಸಲಾಗಿದೆ. ನ್ಯಾಯಾಧೀಶರಾಗಿ ಬಿ ಎಂ ಗಿರಿರಾಜ್ ಕೂಡ ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡಿದ್ದಾರೆ.
ಚಿತ್ರಕ್ಕೆ ಮಾಧುರ್ಯಪೂರ್ಣ ಹಾಡುಗಳನ್ನು ನೀಡುವಲ್ಲಿ ನಕುಲ್ ಅಭಯಂಕರ್ ಯಶಸ್ವಿಯಾಗಿದ್ದಾರೆ. ಒಂದು ಕೌಟುಂಬಿಕ ಮೌಲ್ಯ ಇರುವ ಸಿನಿಮಾ ನಿಮ್ಮ ಆಯ್ಕೆ ಆಗಿದ್ದಲ್ಲಿ ಖಂಡಿತವಾಗಿ ಈ ಚಿತ್ರವನ್ನು ನೀವು ನೋಡಲೇಬೇಕು.





Be the first to comment