ಕೆ.ಡಿ ಟ್ರೇಲರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಅದು ಧ್ರುವ ಸರ್ಜಾ ಸಿನಿಮಾ ಎನ್ನುವುದೇ ಮುಖ್ಯ ಕಾರಣ. ಮಾತ್ರವಲ್ಲ ಪ್ರೇಮ್ ನಿರ್ದೇಶನದ ಚಿತ್ರ ಎನ್ನುವುದು ಮತ್ತೊಂದು ಪ್ರಮುಖ ಕಾರಣ. ಮಾತ್ರವಲ್ಲ, ಈ ಚಿತ್ರದ ಮೂಲಕ ಪ್ರೇಮ್ ಸೇರಿಸಿಟ್ಟಿರುವ ತಾರಾಗಣವಂತೂ ಎಲ್ಲರನ್ನು ನಿಬ್ಬೆರಗು ಮಾಡುವಂತೆ ಇತ್ತು. ಆದರೆ ಇಂಥ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಂದಾಗ ಅಂಥ ನಿರೀಕ್ಷೆಗಳೆಲ್ಲ ಮಣ್ಣು ಪಾಲಾಗಿವೆ.
ಇಡೀ ಟ್ರೇಲರ್ ನಲ್ಲಿ ಕಾಣಿಸಿರೋದು ಒಂದು ರಕ್ತಪಾತ ಮತ್ತು ಇನ್ನೊಂದು ರೀಷ್ಮಾ ನಾಣಯ್ಯ ವರಾತ. ಅಂದರೆ ಈ ವರಾತದಲ್ಲಿರುವುದು ಕೂಡ ದೊಂಬಿ, ಬೆಂಕಿ ಮುಂತಾದ ಪದಗಳೇ ಇವೆ. “ಸೇರಿಸ್ಲ ಜನಾನ?, ಏಳಿಸ್ಲ ದೊಂಬೀನ?
ಹಾಕಿಸ್ಲ ಬೆಂಕೀನ?” ಈ ಡೈಲಾಗ್ ಈಗಾಗಲೇ ಜನಪ್ರಿಯವಾಗಿವೆ. ಮುಂದೆ ರೀಲ್ಸ್ ಮೂಲಕವೂ ಸದ್ದು ಮಾಡಬಹುದು. ಆದರೆ ಒಟ್ಟು ಟ್ರೇಲರ್ ಒಂದು ರೀಷ್ಮಾ ಸಂಭಾಷಣೆಯನ್ನೇ ಮೆಚ್ಚಿಕೊಂಡಿರುವಂತಾಗಿದ್ದು ವಿಪರ್ಯಾಸ.
ಸಾಮಾನ್ಯವಾಗಿ ಧ್ರುವ ಸರ್ಜಾ ಸಂಭಾಷಣೆಗಳೆಂದರೆ ಸಕತ್ತಾಗಿ ಸದ್ದು ಮಾಡುತ್ತವೆ. ಆದರೆ ಇಲ್ಲಿ ಅಂಥ ಸಂದರ್ಭಗಳಿಲ್ಲ. ಮಾತ್ರವಲ್ಲ ಧ್ರುವ ಸರ್ಜಾ ಮೈಕಟ್ಟು ಬಳಸಿಕೊಂಡ ಸಾಹಸ ದೃಶ್ಯಗಳು, ಒಂದೊಳ್ಳೆಯ ಲವ್ ಡೈಲಾಗ್, ಇವ್ಯಾವುದು ಇಲ್ಲಿಲ್ಲ. ಹಾಗಂತ ಚಿತ್ರದಲ್ಲೂ ಇರಲಾರದು ಅಂತ ಏನಿಲ್ಲ. ಇರುವುದಾದರೆ ಅದರ ಒಂದೇ ಒಂದು ಜಲಕ್ ಆದರೂ ಟ್ರೇಲರ್ ಮೂಲಕ ಹೊರಗೆ ಬಿಡಬಹುದಿತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಕೆ.ಡಿ ತಾರಾಗಣದಲ್ಲಿರುವ ಅತಿರಥ ಮಹಾರಥರಿಗೇನೂ ಕೊರತೆ ಇಲ್ಲ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮೊದಲಾದ ತಾರಾಗಣ ಇದ್ದರೂ ಅಂಥದೊಂದು ಸಂಭ್ರಮವನ್ನು ಟ್ರೇಲರ್ ತಲುಪಿಸಿಲ್ಲ. ಬಾಲಿವುಡ್ ನಟ ಸಂಜಯ್ ದತ್ ಸಂಭಾಷಣೆ ನೆನಪಲ್ಲೇ ಉಳಿಯುವುದಿಲ್ಲ. ಆದರೆ ಕಿಚ್ಚ ಸುದೀಪ್ ಡೈಲಾಗ್ ಒಂದು ಮಾತ್ರ ಇನ್ನೇನೋ ಇರಬಹುದು ಎನ್ನುವ ನಿರೀಕ್ಷೆ ಸೃಷ್ಟಿಸಿದೆ.
ಹಾಡುಗಳ ಬಗ್ಗೆ ಹೇಳುವುದಾದರೆ “ಶಿವನೇ ನಿನ್ನಾಟ..” ಬಿಟ್ಟರೆ ಮತ್ತೊಂದು ಹಾಡು ಈಗಲೂ ಜನಪ್ರಿಯತೆಯ ಪಟ್ಟಿ ಸೇರಿಲ್ಲ. ಗ್ರಾಫಿಕ್ಸ್ ದೃಶ್ಯಗಳು ಉತ್ತಮ ಗುಣಮಟ್ಟ ಕಾಪಾಡಿಕೊಂಡಂತೆ ಕಾಣುತ್ತಿಲ್ಲ. ಇಷ್ಟೆಲ್ಲ ಇಲ್ಲಗಳ ನಡುವೆ ಕೂಡ ಪ್ರೇಕ್ಷಕರ ನಿರೀಕ್ಷೆ ಬತ್ತಿಲ್ಲ. ಯಾಕೆಂದರೆ ಒಂದು ಕಾಲದ ದಿಗ್ಗಜರ ಸಮಾಗಮ ಇಲ್ಲಿ ನಡೆದಿದೆ. ಟ್ರೇಲರ್ ನಲ್ಲಿ ಕೈ ಕೊಟ್ಟರೂ ಥಿಯೇಟರ್ ನಲ್ಲಿ ಏನಾದರೂ ಮೋಡಿ ಮಾಡಬಹುದು ಎನ್ನುವ ನಿರೀಕ್ಷೆ ಬತ್ತಿಲ್ಲ.





Be the first to comment