ಬಿ.ಎಂ. ಗಿರಿರಾಜ್ ಅವರ ಮುಂದಿನ ಸಿನಿಮಾ ‘ಕಲ್ಯಾಣಿ’ ಸಿನಿಮಾ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.
‘ಕಲ್ಯಾಣಿ’ ಸಿನಿಮಾ ಚಿತ್ರೀಕರಣವನ್ನು ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ. ಬಸವ ರೆಡ್ಡಿ ಬರೆದ ಕಥೆಯನ್ನು ಆಧಾರವಾಗಿಸಿಕೊಂಡು ಗಿರಿರಾಜ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರವನ್ನು ಕುಮಾರಸ್ವಾಮಿ ಆರ್. ಅವರು ತಮ್ಮ ‘ಆರ್.ಕೆ. ಸಿನಿಮಾಸ್’ ಬ್ಯಾನರ್ ಮೂಲಕ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಸಾಮ್ರಾಟ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಭಾರತದ ನಟಿ ಸಿಮ್ರನ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಹುಲ್ ಜೇಟ್ಲಿ, ಶಮಂತ್ ರಾವ್, ಯಮುನಾ ಶ್ರೀನಿಧಿ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ನವಿರಾದ ಪ್ರೇಮಕಥೆಯ ‘ಕಲ್ಯಾಣಿ’ ಚಿತ್ರ ನಂಬಿಕೆ, ಸ್ನೇಹ ಮತ್ತು ಐಡೆಂಟಿಟಿ ವಿಷಯಗಳನ್ನು ಕೇಂದ್ರಬಿಂದು ಮಾಡಿಕೊಂಡಿದೆ. ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಗಳ ಮುಖಾಮುಖಿಯನ್ನು ಕಥೆಯಲ್ಲಿ ಅನಾವರಣಗೊಳಿಸಲಾಗಿದೆ ಎಂದು ನಿರ್ದೇಶಕ ಗಿರಿರಾಜ್ ತಿಳಿಸಿದ್ದಾರೆ.
ಚಿತ್ರಕ್ಕೆ ಜಿ.ಜೆ. ಭರತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ ಲಾಗರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಭಟ್ಕಳ ಮತ್ತು ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.





Be the first to comment