ನಿರ್ಮಾಣ: ಶ್ರೀ ಹರಿ
ನಿರ್ದೇಶನ: ಕುಶಾಲ್ ಗೌಡ
ಪಾತ್ರವರ್ಗ: ಡಾಲಿ ಧನಂಜಯ್, ಅದಿತಿ ಪ್ರಭುದೇವ, ಯಶ್ ಶೆಟ್ಟಿ, ಪ್ರಾಣ್ಯ ಪಿ. ರಾವ್ ಮುಂತಾದವರು
ರೇಟಿಂಗ್: 4
ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಹಳೇ ಕಾಲದ ಕಥೆ ಹೊಂದಿದೆ. ಇದರ ಮೂಲಕ 90ರ ದಶಕದ ರೆಟ್ರೋ ಅನುಭವವನ್ನು ಪ್ರೇಕ್ಷಕರಿಗೆ ನೀಡಲಾಗಿದೆ. ಮೊಬೈಲ್ ಫೋನ್ ಇಲ್ಲದ ದಿನಗಳನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಲಾಗಿದೆ.
ಚಿತ್ರದ ಕಥಾನಾಯಕ ಕೃಷ್ಣ ಅಲಿಯಾಸ್ ಹಿರೋಶಿಮಾ ಮುಗ್ಧ ಯುವಕ. ಚುಕ್ಕಿ ಎಂಬ ಪುಟ್ಟ ಹುಡುಗಿ ಆತನನ್ನು ಪ್ರೀತಿಯಿಂದ ಮಾಮ ಅಂತ ಕರೆಯುತ್ತಾಳೆ. ಇಬ್ಬರೂ ಒಂದು ಕಾರಿನಲ್ಲಿ ಪ್ರವಾಸ ಹೊರಟಾಗ ಆ ಹುಡುಗಿಯನ್ನು ಕಿಡ್ನಾಪ್ ಮಾಡಿದ ಆರೋಪ ಕೃಷ್ಣನ ಮೇಲೆ ಬರುತ್ತದೆ. ಇದಕ್ಕೆ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಇದನ್ನು ತಿಳಿಯಲು ಸಿನಿಮಾ ನೋಡಬೇಕು.
ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ರುಕ್ಕು ಎಂಬ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ಕಡು ಬಡತನದಲ್ಲಿ ನೊಂದ ಹುಡುಗಿಯ ಪಾತ್ರ ಅವರದ್ದು. ತಂದೆ-ತಾಯಿಯ ಜಗಳದ ಮಧ್ಯದಲ್ಲಿ ನಲುಗಿದ ಬಾಲಕಿಯ ಪಾತ್ರದಲ್ಲಿ ಪ್ರಾಣ್ಯ ಪಿ. ರಾವ್ ಕಾಣಿಸಿಕೊಂಡಿದ್ದಾರೆ.
ಯಶ್ ಶೆಟ್ಟಿ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದಾರೆ. ಕ್ರೂರವಾದ ಆ ಪಾತ್ರಕ್ಕೆ ಅವರ ಗೆಟಪ್ ಸಾಥ್ ನೀಡಿದೆ. ನಾಗಸಾಕಿ ಎಂಬ ಖೈದಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಹಿರೋಶಿಮಾ ಮತ್ತು ನಾಗಸಾಕಿ ನಡುವಿನ ಗೆಳೆತನ, ಜಗಳ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಧನಂಜಯ್ ಅವರು ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯತನವನ್ನು ಮೈತುಂಬ ಆವಾಹಿಸಿಕೊಂಡಿರುವ ಮುಗ್ಧ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಡಿಫರೆಂಟ್ ಆಗಿ ನೋಡಲು ಬಯಸುವ ಅಭಿಮಾನಿಗಳಿಗೆ ‘ಜಮಾಲಿಗುಡ್ಡ’ ಖುಷಿ ನೀಡಬಹುದು.
ಚಿತ್ರ ಉತ್ತಮವಾಗಿ ಬರಲು ಹಿನ್ನೆಲೆ ಸಂಗೀತದಲ್ಲಿ ಅನೂಪ್ ಸೀಳಿನ್, ಸಂಗೀತದಲ್ಲಿ ಅರ್ಜುನ್ ಜನ್ಯ ಕೊಡುಗೆ ನೀಡಿದ್ದಾರೆ.
______
Be the first to comment