ನಿಧನ ವದಂತಿಗೆ ದೊಡ್ಡಣ್ಣ ಖಡಕ್ ಉತ್ತರ

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿಗೆ ಸ್ವತಃ ದೊಡ್ಡಣ್ಣ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.

‘ಪಬ್ಲಿಕ್ ಫ್ರೆಂಡ್’ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ದೊಡ್ಡಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ನಕಲಿ ಪೋಸ್ಟರ್ ವೈರಲ್ ಆಗಿತ್ತು. ದೊಡ್ಡಣ್ಣ ಜೂನ್ 12ರಂದು ನಿಧನರಾಗಿದ್ದಾರೆ ಎಂದು ಉಲ್ಲೇಖಿಸಿ ಭಾವಪೂರ್ಣ ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್‌ಗಳು ಅಭಿಮಾನಿಗಳು ಹಾಗೂ ಆತ್ಮೀಯರಲ್ಲಿ ಆತಂಕ ಸೃಷ್ಟಿಸಿತ್ತು.

ವದಂತಿಗೆ ಪ್ರತಿಕ್ರಿಯಿಸಿರುವ ದೊಡ್ಡಣ್ಣ, “ ಬೆಳಗ್ಗೆ ನಾನು ಎದ್ದೇಳುವ ಮುಂಚೆಯೇ ಯಾರೋ ಅವಿವೇಕಿಗಳು ನಾನು ನಿಧನ ಎಂದು ಸುದ್ದಿ ಹಬ್ಬಿಸಿದ್ದರು. ಅದು ಶುದ್ಧ ಸುಳ್ಳು. ನಾನು ಆರೋಗ್ಯವಾಗಿ, ನೆಮ್ಮದಿಯಾಗಿದ್ದೇನೆ. ಮನೆಯಲ್ಲಿ ಆರಾಮವಾಗಿ ಟೀ ಕುಡಿಯುತ್ತಾ ಟಿವಿ ನೋಡುತ್ತಿದ್ದೇನೆ. ನನಗೇನೂ ಆಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

”ಬೆಳಿಗ್ಗೆಯಿಂದಲೂ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಬಿಟ್ಟುಬಿಡದೇ ಕರೆ ಮಾಡ್ತಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ನೂರುಕಾಲ ಚೆನ್ನಾಗಿರುತ್ತೇನೆ ಅಂತಾ ನಂಬಿದ್ದೇನೆ. ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ಮನೆ ಬಿಡಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

”ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶ್ರದ್ಧಾಂಜಲಿ ಪೋಸ್ಟರ್ ಸಂಪೂರ್ಣ ನಕಲಿ ಹಾಗೂ ಎಡಿಟ್ ಮಾಡಿರುವ ಚಿತ್ರವಾಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ.  ಪೋಸ್ಟರ್ ಹಂಚಿಕೊಳ್ಳಬೇಡಿ” ಎಂದು  ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!