ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ‘ದೃಶ್ಯಂ 3’ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ನಿರ್ದೇಶಕ ಜೀತು ಜೋಸೆಫ್ ಹೇಳಿದ್ದಾರೆ.
‘ದೃಶ್ಯಂ’ ಹಾಗೂ ‘ದೃಶ್ಯ 2’ ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲಿ ಯಶಸ್ಸು ಕಂಡಿದ್ದರಿಂದ ಮೂರನೇ ಭಾಗವೂ ಕನ್ನಡಕ್ಕೆ ಬರಲಿದೆ ಎಂಬ ನಿರೀಕ್ಷೆ ಇತ್ತು. ‘ದೃಶ್ಯಂ 3’ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಕಥೆಯ ಅಂತಿಮ ತಿರುವುಗಳು ಕನ್ನಡ ಹಾಗೂ ತೆಲುಗಿನ ಸ್ಟಾರ್ ನಟರ ಪರದೆ ಇಮೇಜ್‌ಗೆ ಹೊಂದಿಕೆಯಾಗುವುದಿಲ್ಲ. ಇದೇ ಕಾರಣಕ್ಕೆ ಈ ಭಾಷೆಗಳಲ್ಲಿ ರಿಮೇಕ್ ಮಾಡುವುದಿಲ್ಲ ಎಂದು ಜೀತು ಜೋಸೆಫ್ ಸ್ಪಷ್ಟಪಡಿಸಿದ್ದಾರೆ.
‘‘ದೃಶ್ಯಂ 3’ ಹಿಂದಿಯಲ್ಲಿ ಮಾತ್ರ ರಿಮೇಕ್ ಆಗುತ್ತಿದೆ. ಹಿಂದಿ ಆವೃತ್ತಿಯ ಹಕ್ಕುಗಳನ್ನು ಪಡೆದಿರುವ ಅಜಯ್ ದೇವಗನ್ ತಂಡ ಸ್ಥಳೀಯ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಅನುಮತಿ ಕೋರಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
‘ದೃಶ್ಯಂ 3’ ವಿಶ್ವದಾದ್ಯಂತ 235.55 ಕೋಟಿ ರೂ. ಕಲೆಕ್ಷನ್ ಮಾಡಿ ಅತಿ ಹೆಚ್ಚು ಗಳಿಕೆ ಕಂಡ ನಾಲ್ಕನೇ ಮಲಯಾಳಂ ಸಿನಿಮಾ ಎಂಬ ದಾಖಲೆ ಬರೆದಿದೆ. ಸಿನಿಮಾದ ಕಲೆಕ್ಷನ್ ‘ದೃಶ್ಯಂ 4’ ಕುರಿತು ಚರ್ಚೆ ಹುಟ್ಟುಹಾಕಿದರೂ, ಸದ್ಯಕ್ಕೆ ನಾಲ್ಕನೇ ಭಾಗದ ಕಥೆ ಸಿದ್ಧವಾಗಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.





Be the first to comment