ಹಿರಿಯ ನಿರ್ದೇಶಕ ಭಾರತಿ ರಾಜ ನಿಧನ

ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ನಿರ್ದೇಶಕರಾಗಿದ್ದ ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿ ರಾಜ (86) ಬುಧವಾರ ಮುಂಜಾನೆ ನಿಧನರಾದರು.

ವಯೋಸಹಜ ಅನಾರೋಗ್ಯ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಭಾರತಿ ರಾಜ ಚಿತ್ರರಂಗದ ಮೂಲ ಪಾಠಗಳನ್ನು ಕಣಗಾಲ್ ಬಳಿ ಕಲಿತಿದ್ದರು. ಕನ್ನಡದಲ್ಲಿ ಸಿನಿಮಾ ನಿರ್ದೇಶಿಸದಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವರ ಬಾಂಧವ್ಯ ವಿಶೇಷವಾಗಿತ್ತು.

1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಭಾರತಿ ರಾಜ ತಮಿಳು ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದರು. ‘ಕಿಲಕ್ಕೆ ಪೋಗುಂ ರೈಲು’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಓಯಿವತಿಲ್ಲೈ’, ‘ಕಾದಲ್ ಓವಿಯಂ’ ಮತ್ತು ‘ಮುದಲ್ ಮರಿಯಾಥೈ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ತೆಲುಗು ಚಿತ್ರರಂಗದಲ್ಲಿ ಅವರು ಅನೇಕ ಕ್ಲಾಸಿಕ್ ಚಿತ್ರಗಳನ್ನು ನೀಡಿದ್ದು, ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈ ತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’ ಹಾಗೂ ‘ಯುವತರಂ ಪಿಲಿಚಿಂಡಿ’ ಚಿತ್ರಗಳು ಸಿನಿಪ್ರಿಯರ ನೆನಪಿನಲ್ಲಿ ಉಳಿದಿವೆ.

2020ರಲ್ಲಿ ಬಿಡುಗಡೆಯಾದ ‘ಮೀಂದುಮ್ ಒರು ಮರಿಯಾಥೈ’ ಅವರ ಕೊನೆಯ ನಿರ್ದೇಶನದ ಚಿತ್ರವಾಗಿತ್ತು. ನಂತರ ಅವರು ನಟನಾಗಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಕಳೆದ ವರ್ಷ ಪುತ್ರ ಮನೋಜ್ ಭಾರತಿರಾಜ ಅವರ ನಿಧನ ಭಾರತಿ ರಾಜ ಅವರಿಗೆ ತೀವ್ರ ಆಘಾತ ಉಂಟುಮಾಡಿತ್ತು. ಪುತ್ರನ ಅಗಲಿಕೆಯ ನೋವಿನಿಂದ ಹೊರಬರಲು ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಭಾರತಿ ರಾಜ ಅವರ ಅಗಲಿಕೆಯಿಂದ ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

—-

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!