ದೇವಿ ಮಹಾತ್ಮೆ

‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

ಕರಾವಳಿಯ ಗಂಡುಕಲೆ ಯಕ್ಷಗಾನದ ಹಿನ್ನೆಲೆ, ಕುಂದಾಪುರದ ಭಾಷಾ ಸೊಗಡು ಹಾಗೂ ಮಾನವೀಯ ಸಂಬಂಧಗಳ ಸುತ್ತ ಹೆಣೆಯಲಾಗಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಯುವಿಜಿ ಸ್ಟುಡಿಯೋ (UVG Studio) ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಆಕ್ಷನ್-ಕಟ್ ಹೇಳಿದ್ದು, ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಸಿನಿಮಾದ ವಿಶೇಷತೆ ಹಾಗೂ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಂಗಾಯಣ ರಘು, ತಮ್ಮ ಪಾತ್ರ ಮತ್ತು ಕುಂದಾಪುರ ಭಾಷೆಯ ಸವಾಲಿನ ಬಗ್ಗೆ ಮನಬಿಚ್ಚಿ ಮಾತನಾಡಿದರು. “ನನಗೆ ಚಿಕ್ಕಂದಿನಿಂದಲೂ ‘ದೇವಿ ಮಹಾತ್ಮೆ’ ಜೊತೆ ಭಾವನಾತ್ಮಕ ನಂಟಿದೆ, ನಮ್ಮ ಊರಿನಲ್ಲಿ ನಮ್ಮ ತಂದೆ ದೇವಿ ಪಾತ್ರ ಮಾಡುತ್ತಿದ್ದರು. ಈ ಚಿತ್ರದಲ್ಲಿ ನಾನು ‘ಶಂಕರ್’ ಎಂಬ ಪಾತ್ರ ಮಾಡಿದ್ದೇನೆ. ಕುಂದಾಪುರ ಭಾಷೆ ನನಗೆ ಹೊಸದಾಗಿತ್ತು. ಅಲ್ಲಿನ ಸೆಕೆ ಹಾಗೂ ಸಮುದ್ರದ ಒಳಗೆ 5-6 ಕಿಲೋಮೀಟರ್ ಹೋಗಿ ಚಿತ್ರೀಕರಣ ಮಾಡಿದ್ದು ಮರೆಯಲಾಗದ ಅನುಭವ” ಎಂದು ರಂಗಾಯಣ ರಘು ಹೇಳಿದರು.

ದೇವಿ ಮಹಾತ್ಮೆ

ನಿರ್ಮಾಪಕ ಗಾಂಧಿರಾಜನ್ ಅವರ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದ ರಂಗಾಯಣ ರಘು, “ತಮಿಳರಾದರೂ ಕನ್ನಡಿಗರೇ ಆಗಿ ಹೋಗಿರುವ ಗಾಂಧಿರಾಜನ್ ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ತುಡಿತ ಇದ್ದಿದ್ದರಿಂದ ‘ದೇವಿ ಮಹಾತ್ಮೆ’ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗೆಯೇ ನಮ್ಮ ಸಂಚಾರಿ ಥಿಯೇಟರ್‌ನ ಹುಡುಗರು ಇಂದು ನಿರ್ದೇಶಕ, ನಿರ್ಮಾಪಕರಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ. ಇಲ್ಲಿ ಕಲಾವಿದರ ಅಭಿನಯವೇ ನಿಜವಾದ ಅಲಂಕಾರವಾಗಿದ್ದು, ಎಸ್.ಕೆ. ರಾವ್ ಅವರ ಛಾಯಾಗ್ರಹಣ ಕರಾವಳಿಯ ಗಾಳಿ, ಬಿಸಿಲನ್ನು ಅಷ್ಟೇ ಸುಂದರವಾಗಿ ಸೆರೆಹಿಡಿದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಾಗರಾಜ್ ಸೋಮಯಾಜಿ, “ಇದು ಕೇವಲ ದೇವಿ ಮಹಾತ್ಮೆಯ ಕಥೆಯಲ್ಲ, ಬದಲಾಗಿ ದೇವಿ ಮಹಾತ್ಮೆ ಆಡಿಸುವವನ ಕಥೆ. 2000ನೇ ಇಸವಿಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ವಾಸ್ತವ ಬದುಕಿನ ಭಾವನೆಗಳಿವೆ. ಚಿತ್ರದಲ್ಲಿ ರಂಗಾಯಣ ರಘು ಅವರು ಯಾವುದೇ ವೇಷ ಹಾಕಿಲ್ಲ, ಮಹಿಷಾಸುರನ ಪಾತ್ರವನ್ನು ನಂದೀಶ್‌ ಜನ್ನಾಡಿ ಅವರು ನಿರ್ವಹಿಸಿದ್ದು, ಯಕ್ಷಗಾನದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ತೋರಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ದೇವಿ ಮಹಾತ್ಮೆ

ತಮ್ಮ ಸಿನಿಮಾ ಸಿದ್ಧಾಂತದ ಬಗ್ಗೆ ವಿವರಿಸಿದ ನಿರ್ದೇಶಕರು, “ನನಗೆ ಮಾನವೀಯ ಮೌಲ್ಯಗಳ ಕಥೆಗಳೆಂದರೆ ಬಹಳ ಇಷ್ಟ. ಕಮರ್ಷಿಯಲ್ ಅಂಶಗಳಿಗಾಗಿ ಅನಾವಶ್ಯಕ ಫೈಟ್ ಅಥವಾ ಮಸಾಲೆ ಸೇರಿಸಲು ನನ್ನ ಮನಸ್ಸು ಒಪ್ಪುವುದಿಲ್ಲ. ನಾನು ಏನು ನಂಬಿದ್ದೇನೋ ಅದನ್ನೇ ಪ್ರಾಮಾಣಿಕವಾಗಿ ತೆರೆಯ ಮೇಲೆ ತಂದಿದ್ದೇನೆ” ಎಂದರು. ನಾಗರಾಜ್ ಸೋಮಯಾಜಿ, ಅರವಿಂದ ಕುಪ್ಳಿಕರ್, ವಾದಿರಾಜ್ ಶೆಟ್ಟಿ ಹಾಗೂ ಗುರು ಆರ್ಯ ಅವರ ಬರವಣಿಗೆ ಈ ಚಿತ್ರಕ್ಕಿದೆ. ಸಂಭಾಷಣೆಯನ್ನು ಭಾಸ್ಕರ್ ಬಂಗೇರ-ನಾಗರಾಜ್ ಸೋಮಯಾಜಿ ಅವರು ಬರೆದಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ.ಡಿ. ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್, ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್ ಹಾಗೂ ಶೈಲಶ್ರೀ ಮೂಲ್ಕಿ ಸೇರಿದಂತೆ ದೊಡ್ಡ ಕಲಾವಿದರ ಬಳಗವಿದೆ. ಲಿಕಿತ್ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಉಜ್ವಲ್ ಚಂದ್ರ ಸಂಕಲನವಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಡಿಸೆಂಬರ್‌ 4ರಂದು ತೆರೆಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!