ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ನಿಗದಿಯಾಗಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಆರೋಪ ಎದುರಿಸುತ್ತಿರುವ ಸೋನು ನಿಗಮ್ ಕಾರ್ಯಕ್ರಮಕ್ಕೆ ಈಗಾಗಲೇ ಅನುಮತಿ ನೀಡಿದ್ದರೆ ಅದನ್ನು ರದ್ದುಗೊಳಿಸಬೇಕು ಎಂದು ಕರವೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
2025ರ ಏಪ್ರಿಲ್ನಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ಮಾತನಾಡಿದ್ದರು ಎಂಬ ಆರೋಪವನ್ನು ಕರವೇ ಮುಂದಿಟ್ಟಿದೆ. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಥಣಿಸಂದ್ರದಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು ಆವರಣದಲ್ಲಿ ಅಕ್ಟೋಬರ್ 24ರಂದು ಸೋನು ನಿಗಮ್ ಅವರ ‘ದಿ ರೆವಲ್ಯೂಷನ್ ಇಂಡಿಯಾ ಟೂರ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರವೇ ಎಚ್ಚರಿಕೆ ನೀಡಿದೆ.
ಸೋನು ನಿಗಮ್ ಅವರ ಹಳೆಯ ಹೇಳಿಕೆಗೆ ಸಂಬಂಧಿಸಿದ ವಿವಾದ ಮುನ್ನೆಲೆಗೆ ಬಂದಿದ್ದು ಅಕ್ಟೋಬರ್ 24ರ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರ ಈಗ ಪೊಲೀಸ್ ಇಲಾಖೆಯ ಮುಂದಿದೆ.
—–





Be the first to comment