ಅಂಬರ ಗುಡ್ಡ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮಕ್ಕಳ ಸಿನಿಮಾ ‘ಅಂಬರ ಗುಡ್ಡ’

ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆ. ಅಪರೂಪಕ್ಕೆ ಮಕ್ಕಳ ಸಿನಿಮಾಗಳು ಚಂದನವನದಲ್ಲಿ ನೋಡಬಹುದು. ಇದೀಗ ಹೊಸ ತಂಡವೊಂದು ಮಕ್ಕಳ ಸಿನಿಮಾ ಮೂಲಕ ಸಿನಿಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಅಂಬರ ಗುಡ್ಡ’ ಎಂದು ಟೈಟಲ್ ಇಟ್ಟುಕೊಂಡು ಅಂಬರ ಗುಡ್ಡದಲ್ಲಿ ಮಕ್ಕಳು ಎದುರಿಸಿದ ಸಾಹಸದ ಕಥೆಯನ್ನು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಷ್ಣು ತೇಜ.

ವಿಷ್ಣು ತೇಜ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅದ್ಭುತ ಪ್ರತಿಭೆಗಳಿರುವ ಮಕ್ಕಳು ಅಂಬರ ಗುಡ್ಡ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಅಂಬರ ಗುಡ್ಡಕ್ಕೆ ಪ್ರವಾಸಕ್ಕೆಂದು ಹೋಗುವ ಮಕ್ಕಳು ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಹಾಗೂ ಏನೆಲ್ಲ ಕಷ್ಟಗಳು ಎದುರಾಗುತ್ತೆ ಎನ್ನುವುದನ್ನು ನೋಡಬಹುದು.

ಅಂಬರ ಗುಡ್ಡ

ಈ ಚಿತ್ರದಲ್ಲಿ ತನಿಷಾ ಗೌಡ, ಖುಷಿ ಗೌಡ, ಗೀತಾ, ಚಂದ್ರು, ಗಣೇಶ ಸೇರಿದಂತೆ ಅನೇಕ ಮಕ್ಕಳು ನಟಿಸಿದ್ದಾರೆ. ಟ್ರೈಲರ್ ರಿಲೀಸ್ ಮಾಡಿ ಒಬ್ಬರಾಗಿ ಮಾತನಾಡಿದ ಮಕ್ಕಳು, ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಕಾಡಿನಲ್ಲಿ ಶೂಟಿಂಗ್ ಮಾಡುವಾಗ ತುಂಬಾ ಕಷ್ಟವಾಗಿತ್ತು, ಮಳೆ ಬೇರೆ ಸಿಕ್ಕಾಪಟ್ಟೆ ಇತ್ತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಿರ್ದೇಶಕ ವಿಷ್ಣು ತೇಜ ಅವರ ಮಗಳು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿರ್ದೇಶಕ ವಿಷ್ಣು ತೇಜ ಮಾತನಾಡಿ ‘ಎಲ್ಲಾ ಮಕ್ಕಳನ್ನು ಒಟ್ಟಿಗೆ ಸೇರಿಸಿ ಶೂಟಿಂಗ್ ಮಾಡಿರುವುದು ಸಾಹಸವೇ ಆಗಿತ್ತು. ಮಕ್ಕಳನ್ನು ನಿಭಾಯಿಸುವುದು ಕಷ್ಟಕರವಾಗಿತ್ತು. ಒಬ್ಬರು ಒಂದು ರೀತಿಯ ತರ್ಲೆ, ತುಂಟಾಟ ಮಾಡುತ್ತಿದ್ದರು. ಶೂಟಿಂಗ್ ಮಾಡುವಾಗ ಮಗಳಿಗೆ ಹಾವು ಕಚ್ಚಿತ್ತು. ಬಳಿಕ ಚಿಕಿತ್ಸೆ ಕೊಡಿಸಿ ಮತ್ತೆ ಶೂಟಿಂಗ್ ಮಾಡಿ ಮುಗಿಸಿದೆವು. ಈಗ ರಿಲೀಸ್‌‌ಗೆ ರೆಡಿಯಾಗಿದ್ದೇವೆ. ಜೂನ್ 26ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ’ಎಂದರು.

ಅಂಬರ ಗುಡ್ಡ ಸಿನಿಮಾವನ್ನು ಕೊಲ್ಲೂರು ಮೂಕಾಂಬಿಕೆ ಫಾರೆಸ್ಟ್ ಕುಂದಾಪುರ, ಶಿವಮೊಗ್ಗ, ಕೊಡಚಾದ್ರಿ, ಗೋಕರ್ಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಈ ಸಿನಿಮಾಗೆ ಆಕಾಶ್ ಪರ್ವ ಅವರ ಸಂಗೀತ, ದೀಪಕ್ ಕುಮಾರ್ ಅವರ ಛಾಯಾಗ್ರಹಣವಿದೆ.

ಅಂಬರ ಗುಡ್ಡ

Be the first to comment

Leave a Reply

Your email address will not be published. Required fields are marked *

Translate »
error: Content is protected !!