ಅಂದೊಂದಿತ್ತು ಕಾಲ

Movie Review : ಇದು ಡೈರೆಕ್ಟರ್ ಸ್ಪೆಷಲ್ ಸ್ಟೋರಿ..!

ಚಿತ್ರ : ಅಂದೊಂದಿತ್ತು ಕಾಲ

ನಿರ್ದೇಶಕ : ಕೀರ್ತಿ ಕೃಷ್ಣಪ್ಪ
ನಿರ್ಮಾಪಕ : ಭುವನ್ ಸುರೇಶ್
ತಾರಾಗಣ : ವಿನಯ್ ರಾಜ್ ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮೊದಲಾದವರು..

ರೇಟಿಂಗ್ : 3.5/5

ಶಾಲಾ ದಿನಗಳಿಂದಲೇ ಸಿನಿಮಾ ಹುಚ್ಚು ಹತ್ತಿಸಿಕೊಂಡ ಹುಡುಗ. ಅದರಲ್ಲೂ ನಿರ್ದೇಶಕನಾಗುವುದನ್ನೇ ಬಾಳಿನ ಗುರಿಯಾಗಿಸಿಕೊಂಡವನು. ಇಂಥ ಹುಡುಗನಿಗೆ ರಿಯಾಲಿಟಿಯಲ್ಲಿ ನಿರ್ದೇಶನ ಮಾಡಬೇಕಾದ ಪರಿಸ್ಥಿತಿ ಬಂದಾಗ ಎದುರಾಗುವ ಸಮಸ್ಯೆಗಳೇನು? ಅವುಗಳನ್ನು ಈ‌ ನಿರ್ದೇಶಕ ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ.

ಚಿತ್ರದ ನಾಯಕ, ಸಿನಿಮಾ ಪ್ರಿಯ ಯುವಕ ಕುಮಾರನಾಗಿ ವಿನಯ್ ರಾಜ್ ಕುಮಾರ್ ನಟನೆ ಚೆನ್ನಾಗಿದೆ. ಸ್ಟ್ರಗಲ್ ಮಾಡುವ ಯುವಕನ ಎಲ್ಲ ಸಂಕಷ್ಟಗಳನ್ನು ತಮ್ಮ ಪಾತ್ರದ ಮೂಲಕ‌ ಹೊರಗೆ ತರುವಲ್ಲಿ ವಿನಯ್ ಯಶಸ್ವಿಯಾಗಿದ್ದಾರೆ.

ಸಿನಿಮಾ ಅಕ್ಷರಶಃ ಗಾಂಧಿನಗರದ ಗಲ್ಲಿಗಳಿಗೆ ಬೆಳಕು ಚೆಲ್ಲಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಮೊದಲ ಬಾರಿ ಬರುವ ನಾಯಕ ಎದುರಿಸುವ ಸಂದಿಗ್ದತೆ ನೈಜವಾಗಿ ಮೂಡಿ ಬಂದಿದೆ. ಅವಕಾಶಕ್ಕಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲೇ ಚಿತ್ರರಂಗದ ಮಂದಿ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಸಹಾಯಕ ನಿರ್ದೇಶನಕ್ಕೆಂದು ಹೇಳಿ ಕರೆಸಿಕೊಂಡು ಆಫೀಸ್ ಬಾಯ್ ಕೆಲಸ‌ ನೀಡುವ ಪ್ರವೃತ್ತಿಯನ್ನು ಮನಮುಟ್ಟುವಂತೆ ಬಿಡಿಸಿಟ್ಟಿದ್ದಾರೆ. ಹೊಸದಾಗಿ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಕೀರ್ತಿ ಕೃಷ್ಣಪ್ಪ. ತನ್ನ ಅನುಭವದ ಹಿನ್ನೆಲೆಯಲ್ಲೇ ಈ ಸಿನಿಮಾ‌ ಮಾಡಿರಬಹುದೇನೋ ಎನ್ನುವಂತೆ ಸನ್ನಿವೇಶಗಳು ನೈಜವಾಗಿವೆ.

ಚಿತ್ರದಲ್ಲಿ ನಿರ್ದೇಶಕನ ಪ್ರೇಯಸಿಯ ಪಾತ್ರವನ್ನು ಅದಿತಿ ಪ್ರಭುದೇವ ನಿರ್ವಹಿಸಿದ್ದಾರೆ. ವಸುಂಧರಾ ಎನ್ನುವ ಈ‌ ಪಾತ್ರ ಕುಮಾರನ ಪ್ರೇಯಸಿ ಮಾತ್ರವಲ್ಲ, ಸ್ಫೂರ್ತಿ ಶಕ್ತಿಯಾಗಿರುತ್ತಾಳೆ.‌ ಇಂಟರ್ವೆಲ್ ಬಳಿಕ ಎಂಟ್ರಿ ಕೊಟ್ಟರೂ ಕೂಡ ಅದಿತಿ ತಮಗೆ ಸಿಕ್ಕ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ.

ಮೆಮೊರಿ ವಿತ್ ರವಿಚಂದ್ರನ್ ಎನ್ನುವ ರಿಯಾಲಿಟಿ ಶೋ ನಿರೂಪಕರಾಗಿ ಕಾಣಿಸಿಕೊಳ್ಳುವ ಕ್ರೇಜಿಸ್ಟಾರ್
ರವಿಚಂದ್ರನ್ ಚಿತ್ರದ ಕ್ಲೈಮ್ಯಾಕ್ಸ್ ಗೆ ಹೊಸ ಕಳೆ ತರುತ್ತಾರೆ. ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿರುವ ಕಡ್ಡಿಪುಡಿ ಚಂದ್ರು ಪಾತ್ರ ಗಮನ ಸೆಳೆಯುವಂತಿದೆ.
ಕುಮಾರನ ತಾಯಿಯಾಗಿ ನಟಿಸಿರುವ ಅರುಣಾ ಬಾಲರಾಜ್ ಅಭಿನಯ ಭಾವನಾತ್ಮಕ ಸನ್ನಿವೇಶದ ಸೃಷ್ಟಿಗೆ ಕಾರಣವಾಗುತ್ತದೆ. ಖುದ್ದು ಚಿತ್ರದ ನಿರ್ಮಾಪಕ‌ ಭುವನ್ ಸುರೇಶ್ ಕೂಡ ಕ್ಯಾಮಿಯೋ‌ ಮಾಡಿದ್ದಾರೆ. ನಿರ್ಮಾಪಕರಾಗಿಯೇ ನಟಿಸಿ ಗಮನ‌ ಸೆಳೆಯುತ್ತಾರೆ.

ಇದು ಸಿನಿಮಾದ ಕಥೆ. ಆದರೆ ಸಿನಿಮಾ ಪ್ರೀತಿಸುವವರಿಗೆ ಪಾಠವಾಗಬಲ್ಲಂಥ ವಸ್ತು ಈ‌ ಕಥೆಯಲ್ಲಿದೆ. ಗ್ಲಾಮರ್ ಲೋಕದ ಹಿಂದಿನ ಶ್ರಮ ಹೇಗಿರುತ್ತದೆ? ಒಂದು ಯಶಸ್ಸಿನ ತನಕ ಬದುಕು ಹೇಗೆ ಡೋಲಾಯಮಾನ ಆಗಿರುತ್ತದೆ ಎನ್ನುವುದನ್ನೇ ‘ಅಂದೊಂದಿತ್ತು ಕಾಲ’ದ ಮೂಲಕ‌ ನಿರ್ದೇಶಕ ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ಇನ್ನೇನಿದ್ದರೂ ಚಿತ್ರ ಪ್ರೇಮಿಗಳಿಗೆ ಥಿಯೇಟರ್ ನಲ್ಲೇ ರಸೌದತಣ ಸವಿಯುವ ಕಾಲ.

*****************

Be the first to comment

Leave a Reply

Your email address will not be published. Required fields are marked *

Translate »
error: Content is protected !!