Movie Review: ಸ್ನೇಹಾನ, ಪ್ರೀತೀನಾ..? ಪರೀಕ್ಷೆಗೊಂದು ದಿನ!

ಚಿತ್ರ: ಎ ಡೇಟ್
ನಿರ್ದೇಶನ: ವಿಮಲ್ ರಾಜ್ ಎನ್
ನಿರ್ಮಾಣ: ಎ ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಪ್ರೊಡಕ್ಷನ್
ತಾರಾಗಣ: ಸುಜನೀತ್ ಶೆಟ್ಟಿ, ಅಶ್ವಿನಿ ಶೆಣೈ ಮೊದಲಾದವರು…
ರೇಟಿಂಗ್ : 3.5/5

ಹುಡುಗರು ಪ್ರೇಮವನ್ನು ಹೇಳಿಕೊಳ್ಳಲೆಂದೇ ಡೇಟ್ ಗೆ ಕರೆಯುತ್ತಾರೆ ಅಥವಾ ಪ್ರೇಮದ ಹೆಸರಲ್ಲಿ ಬೆಡ್ ರೂಮ್ ಗೆ ಕರೆಯುತ್ತಾರೆ ಎಂದು ಫಿಕ್ಸಾದ ಹುಡುಗಿ. ಆದರೆ ಹುಡುಗಿಗೆ ಬೆಂಗಳೂರನ್ನು ಸುತ್ತಾಡಿ ತೋರಿಸುವ ಕನಸಿರುವ ಹುಡುಗ ಡೇಟಿಂಗ್ ಗೆ ಕರೆಯುತ್ತಾನೆ. ಆದರೆ ಆ ದಿನ ನಿಜಕ್ಕೂ ನಡೆಯುವುದೇನು? ಇದುವೇ ಈ ಚಿತ್ರದ ಹೂರಣ.

ಆಕೆಯ ಹೆಸರು ಮೋನಿಷಾ. ದೆಹಲಿಯಿಂದ ಬೆಂಗಳೂರಿಗೆ ಬಂದಿರುತ್ತಾಳೆ. ಆಕೆಯ ಆಫೀಸ್ ನಲ್ಲೇ ವೃತ್ತಿಯಲ್ಲಿರುವವನು ಕಾರ್ತಿಕ್. ಮೋನಿಷಾ ಮತ್ತು ಕಾರ್ತಿಕ್ ಒಂದು ಡೇಟಿಂಗ್ ಗೆ ಹೋಗುತ್ತಾರೆ.‌ ಕಾರ್ತಿಕ್ ಆಕೆಯನ್ನು ಬೆಂಗಳೂರೆಲ್ಲ ಸುತ್ತಿಸುತ್ತಾನೆ. ಆ ಸುತ್ತಾಟ ಮುಗಿಯುವುದರೊಳಗೆ ಒಂದು ಗಂಭೀರ ಮಾತುಕತೆ ನಡೆಯುತ್ತದೆ. ಅದೇನು? ಸ್ನೇಹ ಪ್ರೇಮದ ಪರೀಕ್ಷೆಯಲ್ಲಿ ಬರುವ ಫಲಿತಾಂಶವೇನು ಎನ್ನುವುದೇ ಚಿತ್ರ.‌

ಕಾರ್ತಿಕ್ ಪಾತ್ರದ ಮೂಲಕ ಚಂದನವನಕ್ಕೆ ನಾಯಕನಾಗಿ ಪ್ರವೇಶಿಸಿರುವ ಸುಜನೀತ್ ಶೆಟ್ಟಿ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಕಾರ್ತಿಕ್ ಗೆ ಜೋಡಿಯಾಗಿ ಡೇಟಿಂಗ್‌ಗೆ ಹೋಗುವ ಮೋನಿಷಾ ಪಾತ್ರವನ್ನು ನವನಟಿ ಅಶ್ವಿನಿ ಶೆಣೈ ಅಭಿನಯಿಸಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಪಾತ್ರಗಳಲ್ಲಿ ಪೈಪೋಟಿಯ ಅಭಿನಯ ನೀಡಿದ್ದಾರೆ.

ನಿರ್ದೇಶಕರು ಈ ಚಿತ್ರದಲ್ಲಿ ಎರಡು ಪಾತ್ರಗಳಿಗಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಇಬ್ಬರನ್ನು ಮಾತ್ರ ಇಟ್ಟುಕೊಂಡು ಎಂಗೇಜಿಂಗ್ ಆಗುವ ಹಾಗೆ ಸಿನಿಮಾ ಮಾಡಿರುವುದನ್ನು ಖಂಡಿತವಾಗಿ ಮೆಚ್ಚಲೇಬೇಕು. ಡೇಟಿಂಗ್ ಹೆಸರಲ್ಲಿ ಬೆಂಗಳೂರು ಸುತ್ತುವ ಜೋಡಿಯಿಂದಾಗಿ ರಾಜಧಾನಿಯ ವಿವಿಧ ಪ್ರವಾಸಿತಾಣಗಳು ಪರದೆಯ ಮೇಲೆ ರಾರಾಜಿಸಿವೆ. ಛಾಯಾಗ್ರಹಣದಲ್ಲಿ ಅದ್ಭುತವಾಗಿ ಮೂಡಿರುವ ದೃಶ್ಯಗಳಿಗೆ ಹಿನ್ನೆಲೆಯಾಗಿ ಮಾಧುರ್ಯಪೂರ್ಣ ಸಂಗೀತವಿದೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಚಿತ್ರಗಳು ಬರುತ್ತಿಲ್ಲ ಎಂದು ಆರೋಪಿಸುವವರು ನೋಡಬೇಕಾದ ಚಿತ್ರ ಇದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!