ಚಿತ್ರ: ಲಕ್ಷ್ಮೀಪುತ್ರ
ನಿರ್ದೇಶನ: ವಿಜಯ್ ಸ್ವಾಮಿ
ನಿರ್ಮಾಣ: ಅನ್ನಪೂರ್ಣ ಅರ್ಜುನ್
ತಾರಾಗಣ: ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧ ಮೊದಲಾದವರು….
ರೇಟಿಂಗ್ : 4/5
ಇದು ಗ್ರಾಮೀಣ ಭಾಗದಲ್ಲಿ ನಡೆಯುವಂಥ ಕಥೆ. ಚಿತ್ರದಲ್ಲಿ ಕೃಷ್ಣ ಎಂಬ ಯುವಕನಿಗೆ ಮದುವೆ ವಯಸ್ಸು ದಾಟಿದರೂ ಹುಡುಗಿ ಸಿಕ್ಕಿರುವುದಿಲ್ಲ. ಹಾಗಂತ ಹುಡುಗನ ಡಿಮ್ಯಾಂಡ್ ಗೆ ಏನೂ ಕಡಿಮೆ ಇರುವುದಿಲ್ಲ. ಪ್ರೇಮ ವಿವಾಹವೇ ಆತನ ಗುರಿ. ಇಂಥ ಸಂದರ್ಭದಲ್ಲಿ ಕೃಷ್ಣನಿಗೆ ಪ್ರೇಮಿಸುವ ಅವಕಾಶ ಸಿಗುತ್ತದೆ. ಮಾತ್ರವಲ್ಲ, ಭಗ್ನ ಪ್ರೇಮಿಯಾಗುವ ಸಂದರ್ಭವೂ ಸೃಷ್ಟಿಯಾಗುತ್ತದೆ. ಲಕ್ಷ್ಮೀಪುತ್ರನಿಗೆ ಇಂಥ ಪರಿಸ್ಥಿತಿ ಎದುರಾಗಲು ಕಾರಣವೇನು? ಈ ಚಿತ್ರದಲ್ಲಿ ಪುತ್ರ ಕೃಷ್ಣನ ಮೇಲೆ ತಾಯಿ ಲಕ್ಷ್ಮಿಯ ಪ್ರಭಾವ ಏನು ಎನ್ನುವುದನ್ನೆಲ್ಲ ಪರದೆಯ ಮೇಲೆ ಅದ್ಭುತವಾಗಿ ತೋರಿಸಲಾಗಿದೆ.
ಕೃಷ್ಣನಾಗಿ ಚಿಕ್ಕಣ್ಣ ಕೃಷ್ಣಲೀಲೆಯನ್ನು ಚೆನ್ನಾಗಿಯೇ ಪ್ರದರ್ಶಿಸಿದ್ದಾರೆ. ಹಾಸ್ಯ ಪಾತ್ರಗಳಿಂದ ಜನ ಮೆಚ್ಚುಗೆ ಪಡೆದ ನಟ ಚಿಕ್ಕಣ್ಣ. ಬಹುಶಃ ಇದೇ ಕಾರಣವೇ ಇರಬೇಕು. ಹಾಸ್ಯದಿಂದ ಕೂಡಿದ ಮಾಸ್ ಪಾತ್ರದ ಮೂಲಕವೇ ಸ್ಟಾರ್ ನಾಯಕನಾಗಿ ತೋರಿಸಿದ್ದಾರೆ ನಿರ್ದೇಶಕರು. ಆದರೆ ವಿಶೇಷ ಏನೆಂದರೆ ಚಿಕ್ಕಣ್ಣ ತಮ್ಮ ಪ್ರತಿಭೆಯನ್ನು ಹಾಸ್ಯಕ್ಕಷ್ಟೇ ಸೀಮಿತಗೊಳಿಸಿಲ್ಲ. ಚಿತ್ರದಲ್ಲಿ ಭಗ್ನಪ್ರೇಮಿಯ ಪಾತ್ರವನ್ನು ತುಂಬ ಅದ್ಭುತವಾಗಿ ನಿರ್ವಹಿಸಿದ್ದಾರೆ.
ಚಿಕ್ಕಣ್ಣನ ಪ್ರೇಯಸಿಯ ಪಾತ್ರವನ್ನು ವಂದಿತಾ ಗೌಡ ನಿರ್ವಹಿಸಿದ್ದಾರೆ. ವಂದಿತಾ ಕೂಡ ತಮ್ಮ ಪಾತ್ರದಲ್ಲಿನ ಎರಡು ಶೇಡ್ ಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಾಯಿ ಪಾತ್ರದಲ್ಲಿ ತಾರಾ ಅವರು ವೈವಿಧ್ಯಮಯ ಶೇಡ್ ನಲ್ಲಿ ನಟಿಸಿದ್ದಾರೆ. ಚಿತ್ರದ ಹೆಸರು ಕೇಳಿದವರು ಇದು ಮಾಮೂಲಿ ತಾಯಿ ಸೆಂಟಿಮೆಂಟ್ ಚಿತ್ರ ಎಂದೇ ಅಂದುಕೊಳ್ಳುವುದು ಖಚಿತ. ಆದರೆ ಇಲ್ಲಿ ತಾರಾ ಅವರ ಪಾತ್ರ ಹಾಸ್ಯ ಮತ್ತು ಸೆಂಟಿಮೆಂಟ್ ಗೆ ಮಾತ್ರ ಸೀಮಿತವಾಗಿಲ್ಲ.
ಬಹುಶಃ ತಮ್ಮ ಪಾತ್ರದಲ್ಲಿ ಇಂಥದೊಂದು ಟ್ವಿಸ್ಟ್ ಇರುವುದಕ್ಕೇನೇ ತಾರಾ ಅವರು ಈ ಚಿತ್ರವನ್ನು ಒಪ್ಪಿಕೊಂಡಿರುವುದು ಸತ್ಯ. ಆದರೆ ಆ ತಿರುವು ಏನು ಎನ್ನುವುದನ್ನು ಪರದೆಯ ಮೇಲೆ ನೋಡುವ ಕುತೂಹಲ ನಿಮ್ಮಲ್ಲೇ ಇರುವುದು ಉತ್ತಮ.
ಈ ಚಿತ್ರದಲ್ಲಿ ಹಾಸ್ಯ ಕಲಾವಿದರುಗಳ ಸಮಾಗಮವೇ ನಡೆದಿದೆ. ಶಿವರಾಜ್ ಕೆ.ಆರ್ ಪೇಟೆ, ಧರ್ಮಣ್ಣ, ಕುರಿ ಪ್ರತಾಪ್, ಗಿರೀಶ್ ಶಿವಣ್ಣ ಹೀಗೆ ಒಬ್ಬರನ್ನು ಮೀರಿದಂತೆ ಒಬ್ಬರು ಹಾಸ್ಯ ದಿಗ್ಗಜರು ಈ ಚಿತ್ರದಲ್ಲಿದ್ದಾರೆ.
ಚಿಕ್ಕಣ್ಣನ ಹಾಸ್ಯವನ್ನು ನಂಬಿ ಬಂದವರಿಗೆ ಇಲ್ಲಿ ಹಾಸ್ಯವೂ ಇದೆ. ವೈವಿಧ್ಯಮಯ ಅಭಿನಯವೂ ಇದೆ. ಚಿತ್ರದಿಂದ ಚಿತ್ರಕ್ಕೆ ಚಿಕ್ಕಣ್ಣನ ಬೆಳವಣಿಗೆಯನ್ನು ದಾಖಲಿಸುವಂಥ ಚಿತ್ರ ಇದು.





Be the first to comment