ಟಾಲಿವುಡ್ ಸೂಪರ್‌ಸ್ಟಾರ್, ಶಾಸಕ ನಂದಮೂರಿ ಬಾಲಕೃಷ್ಣ ಅವರ ಪುತ್ರಿ ತೇಜಸ್ವಿನಿ ನಿರ್ಮಾಪಕಿಯಾಗಿ ತಮ್ಮ ಸಿನಿಮಾ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಪ್ರಭಾವ ಹೊಂದಿರುವ ನಂದಮೂರಿ ಕುಟುಂಬದ ತೇಜಸ್ವಿನಿ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅವರು ನಟನೆಯ ಬದಲು ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವೊಂದನ್ನು ನಿರ್ಮಿಸಲು ತೇಜಸ್ವಿನಿ ಯೋಜನೆ ರೂಪಿಸಿದ್ದಾರೆ. ತಮ್ಮ ಸಹಪಾಠಿ ಭುವನ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಸಿಂಧೂರಪುವು ಕೃಷ್ಣಾರೆಡ್ಡಿ ಅವರ ಪುತ್ರ ಅನ್ವೇಶ್ ನಾಯಕ ನಟನಾಗಿ ಪರಿಚಯವಾಗಲಿದ್ದಾರೆ. ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಈಗಾಗಲೇ ಆರಂಭವಾಗಿದೆ. ನವೆಂಬರ್ 23ರಂದು ವಿಶಾಖಪಟ್ಟಣದ ಗೀತಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.
ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರ ಸಿನಿಮಾ ಬಗ್ಗೆ ಕುತೂಹಲ ಮುಂದುವರಿದಿದೆ. ಅವರ ಹೊಸ ಸಿನಿಮಾ ಘೋಷಣೆಯಾಗಿ ಒಂದು ವರ್ಷ ಕಳೆದಿದ್ದರೂ ಚಿತ್ರೀಕರಣ ಆರಂಭವಾಗಿಲ್ಲ. ಬಾಲಕೃಷ್ಣ ಅವರೇ ಕಥೆ ಬರೆದು, ಮಗನ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
—–





Be the first to comment