ಚಿತ್ರ: ಕಲುಷ
ಕಥೆ-ಚಿತ್ರಕಥೆ ಸಂಭಾಷಣೆ : ಯುವನ್ ಪ್ರತಾಪ್
ನಿರ್ಮಾಣ: ಎಸ್.ಪಿ.ವಿ ಪ್ರೊಡಕ್ಷನ್
ತಾರಾಗಣ: ಯುವನ್ ಪ್ರತಾಪ್, ಐಶ್ವರ್ಯಾ ಮುತ್ತುರಾಜ್ ಕೆ.ಎಸ್ ಶ್ರೀಧರ್ ಮೊದಲಾದವರು…
ರೇಟಿಂಗ್ : 3/5
ಇದು ವೈದ್ಯಕೀಯ ಪಾತಕ ಲೋಕದ ಭಯಾನಕತೆಯನ್ನು ತೆರೆದಿಡುವ ಚಿತ್ರ. ಕಲುಷ ಎನ್ನುವುದಕ್ಕೆ ಚಿತ್ರತಂಡ ನೀಡಿರುವ ಅರ್ಥ ಕಲ್ಮಶ ಎನ್ನುವುದಾಗಿದೆ. ಶೀರ್ಷಿಕೆ ಅರ್ಥವಾಗದೇ ಹೋದರೂ, ಈ ಚಿತ್ರ ನೋಡಿದಾಗ ಮಾತ್ರ ಮೆಡಿಕಲ್ ಫೀಲ್ಡ್ ಮಾಫಿಯಾದ ಕಲ್ಮಶ ಅರಿವಾಗುವುದು ಖಚಿತ. ಯಾಕೆಂದರೆ ಅಂಥದೊಂದು ಕರಾಳ ಮುಖವನ್ನು ಈ ಚಿತ್ರ ತೆರೆದಿಟ್ಟಿದೆ.
ಆ ವ್ಯಕ್ತಿಯ ಹೆಸರು ಸೋಮಣ್ಣ. ಮರಣೋತ್ತರ ಪರೀಕ್ಷೆಯ ಬಳಿಕ ಹೆಣಗಳ ಅಂತ್ಯವಿಧಿ ನಡೆಸುವುದು ಆತನ ಕೆಲಸ. ಆತನಿಗೊಬ್ಬ ಪುತ್ರ. ಆತ ಒಬ್ಬನನ್ನು ಕೊಚ್ಚಿ ಕೊಲೆಗೈದಿರುತ್ತಾನೆ. ಕೊಲೆಗಾರ ತನ್ನ ಸ್ವಂತ ಪುತ್ರನಲ್ಲ, ದತ್ತು ಪುತ್ರ ಎನ್ನುವ ಸತ್ಯವನ್ನು ಸೋಮಣ್ಣ ಪೊಲೀಸರ ಮುಂದೆ ಹೇಳುತ್ತಾನೆ. ಸೋಮಣ್ಣನ ಮುಂದೆ ಅನಾಥ ಶವಗಳು ಬರುತ್ತಲೇ ಇರುತ್ತವೆ. ಆಗ ಅರಿವಾಗುವ ಸತ್ಯ ಏನೆಂದರೆ ಇವುಗಳು ಅಂಗಾಗ ಕಳವಿಗಾಗಿ ವೈದ್ಯಕೀಯ ವಲಯದಲ್ಲಿ ನಡೆಯುವ ಕೊಲೆಗಳು ಎನ್ನುವ ಸತ್ಯ ಅರಿವಾಗುತ್ತದೆ. ಅಷ್ಟು ಹೊತ್ತಿಗೆ ದತ್ತು ಪುತ್ರನ ಬಾಳು ಕೂಡ ವೈದ್ಯಕೀಯ ವಲಯದ ಪ್ರಯೋಗಕ್ಕೆ ಬಲಿಯಾಗಿರುತ್ತದೆ. ಅದೇನು ಜಾಲ? ಅದನ್ನು ಭೇದಿಸುವುದು ಹೇಗೆ? ಎನ್ನುವ ಕಥೆಯೇ ಕಲುಷ.
ಎಲ್ಲ ದುರ್ಮರಣಗಳಿಗೂ ವೈದ್ಯನೊಬ್ಬನ ಕುಕೃತ್ಯವೇ ಕಾರಣವಾಗಿರುತ್ತದೆ. ಬೀದಿ ಬದಿಯಲ್ಲಿರುವ ಅನಾಥರಿಗೆ ರಾತ್ರಿ ಎಲ್ಲ ಹೋಗಿ ಆಹಾರ ಹಂಚುತ್ತಾನೆ. ಅದರಲ್ಲಿ ಮನತ್ತಿನ ಔಷಧಿ ಹಾಕಿರುತ್ತಾನೆ. ಅನಾಥರು ಸ್ಮೃತಿ ಕಳೆದುಕೊಂಡೊಡನೆ ಅವರನ್ನು ಆಸ್ಪತ್ರೆಗೆ ತರುತ್ತಾನೆ. ಚಿಕಿತ್ಸೆಯ ಹೆಸರಲ್ಲಿ ಅವರ ಮೆದುಳನ್ನೇ ತೆಗೆದು ಪ್ರಯೋಗ ನಡೆಸುತ್ತಾನೆ. ದೇಹಗಳು ಅನಾಥ ಶವವಾಗಿ ಬಿಡುತ್ತವೆ. ಚಿತ್ರದಲ್ಲಿ ಈ ವೈದ್ಯನ ಹೆಸರು ಡಾ.ಕಲ್ಮೇಶ್. ನಾಯಕ ಮತ್ತು ನಿರ್ಮಾಣ ಜವಾಬ್ದಾರಿ ಹೊತ್ತ ಯುವಾನ್ ಪ್ರತಾಪ್ ಅವರ ಪ್ರಕಾರ ಇದು ಇಂಥದೇ ನೈಜ ಘಟನೆಯನ್ನು ಆಧಾರವಾಗಿಸಿ ತಯಾರಾಗಿರುವಂಥ ಚಿತ್ರ. ಬಳ್ಳಾರಿಯ ಹರಪನಹಳ್ಳಿಯಲ್ಲಿ ನಿಷ್ಕರುಣಿ ವೈದ್ಯರ ಜಾಲ ನಡೆಸಿದ ಕೃತ್ಯವನ್ನೇ ಆಧಾರವಾಗಿಸಿ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಈ ಎಲ್ಲ ಘಟನೆಗಳಿಗೆ ಸೋಮಣ್ಣ ಸಾಕ್ಷಿ. ಆದರೆ ತನ್ನ ಮಗನನ್ನೇ ಪ್ರಯೋಗಕ್ಕೆ ಬಳಸಿ ಕೊಲೆಗಾರನಾಗಿಸಿರುವ ಸತ್ಯ ಕೂಡ ಸೋಮಣ್ಣನಿಗೆ ಅರಿವೇ ಇರುವುದಿಲ್ಲ. ಮಗ ದೇವನ ಪರಿಸ್ಥಿತಿ ಹಾಗೆ ಆಗಿದ್ದೇಕೆ? ಈ ಕಥೆಯೇ ಚಿತ್ರದ ಜೀವಾಳ.
ಇಡೀ ಚಿತ್ರದ ಜೀವಾಳ, ವೈದ್ಯರ ಪರೀಕ್ಷೆಗೆ ಗುರಿಯಾಗುವ ಜೀವಂತ ಸಾಕ್ಷಿಯಾದ ದೇವನ ಪಾತ್ರವನ್ನು ಯುವನ್ ಪ್ರತಾಪ್ ನಿರ್ವಹಿಸಿದ್ದಾರೆ. ಯುವನ್ ಸ್ವತಃ ಒಬ್ಬ ಕಲೆಗಾರನಂತೆ ಕಾಣಿಸಲು ನಡೆಸಿರುವ ಪ್ರಯತ್ನ ಪರದೆಯ ಮೇಲೆ ಎದ್ದು ಕಾಣುವಂತಿದೆ. ದೇವನಿಗೊಬ್ಬ ಪ್ರೇಯಸಿ ಇರುತ್ತಾಳೆ. ಆಕೆ ಪೆನ್ನು, ಪೇಪರ್ ಮಾರಾಟ ನಡೆಸುವ ಬಡ ಹೆಣ್ಣುಮಗಳು. ಪೊರ್ಕಿಯ ಬಾಳಲ್ಲಿ ಬರುವ ಮುಗ್ದ ಯುವತಿಯ ಪಾತ್ರವನ್ನು ನಟಿ ಐಶ್ವರ್ಯ ಮುತ್ತುರಾಜ್ ಸಮರ್ಥವಾಗಿ ನಿಭಾಯಿಸಿದ್ದಾರೆ. ದೇವನ ತಂದೆ ಸೋಮಣ್ಣನ ಪಾತ್ರವನ್ನು ಬಲ ರಾಜ್ವಾಡಿ ನಿರ್ವಹಿಸಿದ್ದಾರೆ. ಯಾವುದೇ ಪಾತ್ರವನ್ನು ಕೂಡ ಲೀಲಾಜಾಲವಾಗಿ ನಿರ್ವಹಿಸುವ ಬಲ ರಾಜ್ವಾಡಿಯವರು ಈ ಬಾರಿ ಕೂಡ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಪೂರ್ತಿ ಘಟನೆಯ ಬಗ್ಗೆ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯಾಗಿ ಕೆ.ಎಸ್ ಶ್ರೀಧರ್ ಅಭಿನಯಿಸಿದ್ದಾರೆ. ಅವರ ನಟನೆ ದೃಶ್ಯಕ್ಕೆ ಗಾಂಭೀರ್ಯತೆ ತಂದುಕೊಟ್ಟಿದೆ.ನರ್ಸ್ ಪಾತ್ರದಲ್ಲಿ ಸಂಗೀತಾ ನರೇಂದ್ರ ಚಿಕ್ಕ ಪಾತ್ರವಾದರೂ ಚೆನ್ನಾಗಿ ಅಭಿನಯಿಸಿದ್ದಾರೆ.
ನೈಜ ಕಥೆ, ನೈಜ ಅಭಿನಯದ ಜತೆಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಈ ಚಿತ್ರದಲ್ಲಿವೆ. ಹೊಡೆದಾಟದ ದೃಶ್ಯಗಳಾಗಲೀ, ಹಾಡುಗಳನ್ನಾಗಲೀ ಚಿತ್ರೀಕರಿಸಿದ ರೀತಿ ಗಮನಾರ್ಹವಾಗಿದೆ. ಭರತ್ ಛಾಯಾಗ್ರಹಣ ಕೂಡ ಕಥೆಯನ್ನು ಕುತೂಹಲಗೊಳಿಸುವಲ್ಲಿ ಸಾಥ್ ನೀಡಿದೆ. ಕ್ಲಾಸ್ ಜತೆಗೆ ಮಾಸ್ ಅಂಶಗಳನ್ನು ಸೇರಿಸಿರುವ ಈ ಚಿತ್ರ ಯುವ ಹೃದಯಗಳನ್ನು ಗೆಲ್ಲುವಲ್ಲಿ ಸಂದೇಹವಿಲ್ಲ.





Be the first to comment