ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸಿ, ನಿರ್ದೇಶಕ ಕೀರ್ತನ್ ನಾಡಗೌಡ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕಲಾಜಿಕಲ್-ಸೂಪರ್ನ್ಯಾಚುರಲ್ ಹಾರರ್ ಥ್ರಿಲ್ಲರ್ ‘418’ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 23ರಂದು ತೆರೆಕಂಡ ಈ ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿ, ಬಾಕ್ಸ್ ಆಫೀಸ್ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಹಮ್ಮಿಕೊಂಡಿದ್ದ ಚಿತ್ರತಂಡ, ಸಿನಿಮಾ ನಿರ್ಮಾಣದ ಹಿಂದಿನ ರೋಚಕ ಅನುಭವಗಳು ಮತ್ತು ಯಶಸ್ಸಿನ ಸಂತಸವನ್ನು ಹಂಚಿಕೊಂಡಿತು.
ತಮ್ಮ ಮೊದಲ ಚಿತ್ರದ ಪರಿಕಲ್ಪನೆಯ ಬಗ್ಗೆ ಮಾತನಾಡಿದ ನಿರ್ದೇಶಕ ಕೀರ್ತನ್ ನಾಡಗೌಡ, ತೆರೆಯ ಮೇಲೆ ನೈಜ ಭಯ ಹುಟ್ಟಿಸಲು ಮುಖವಾಡ ಧರಿಸಿದ ರಾಕ್ಷಸರೋ ಅಥವಾ ಕಿವಿಗಡಚಿಕ್ಕುವ ಶಬ್ದ ತಂತ್ರಗಳೋ ಬೇಕಿಲ್ಲ, ಬದಲಿಗೆ ನಮ್ಮದೇ ಆಲೋಚನೆಗಳು ನಿಯಂತ್ರಣ ತಪ್ಪಿ ಗೊಂದಲಕ್ಕೀಡಾದಾಗ ನಿಜವಾದ ಆತಂಕ ಶುರುವಾಗುತ್ತದೆ ಎಂದರು. “ತಾಯಿಯ ಜೋಗುಳ ಮೃದು ಮತ್ತು ಹಿತಕರವಾಗಿರುವುದು ಸಹಜ. ಆದರೆ ಅದೇ ಮೃದುವಾದ ರಾಗವನ್ನು ತಿರುಚಿ, ಕತ್ತಲೆಯ ಕಾರಿಡಾರ್ನಲ್ಲಿ ಯಕ್ಷಗಾನದ ಗೆಜ್ಜೆಯ ಹೆಜ್ಜೆಯ ಸದ್ದಿನೊಂದಿಗೆ ಬೆರೆಸಿದರೆ ಅದು ಎಂತಹವರಲ್ಲೂ ಭಯ ಹುಟ್ಟಿಸುತ್ತದೆ. ರಕ್ತಪಾತ ತೋರಿಸುವ ಬದಲು, ಕತ್ತಲಲ್ಲಿ ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಭವವೇ ಪ್ರೇಕ್ಷಕರಲ್ಲಿ ನಡುಕ ತರಿಸುತ್ತದೆ” ಎಂದು ವಿವರಿಸಿದರು. ಅಲ್ಲದೆ, ತಮ್ಮ ಮೆಂಟರ್ ಪ್ರಶಾಂತ್ ನೀಲ್ ಅವರ ನಿರ್ದೇಶನ ಶೈಲಿಯ ಪ್ರಭಾವಕ್ಕೆ ಒಳಗಾಗದೆ, ಕಥೆಗೆ ತಕ್ಕಂತೆ ನೈಜ ಧ್ವನಿಗಳ ಮೂಲಕವೇ ಹೊಸ ಹಾದಿ ಹಿಡಿದಿರುವುದಾಗಿ ತಿಳಿಸಿದರು.

ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟಿ ಚೈತ್ರಾ ಜೆ. ಆಚಾರ್, ತಮ್ಮ ತಾಯ್ತನ ವಂಚಿತ ಅಸಹಾಯಕ ಪಾತ್ರದ ಆಳವನ್ನು ಬಿಚ್ಚಿಟ್ಟರು. “ನಮ್ಮ ಸಮಾಜದಲ್ಲಿ ಹೆಣ್ಣೊಬ್ಬಳು ಮಗುವನ್ನು ಪಡೆಯಲು ಸಾಧ್ಯವೇ ಇಲ್ಲವೇ ಎಂಬುದರ ಮೇಲೆಯೇ ಆಕೆಯ ಮೌಲ್ಯವನ್ನು ನಿರ್ಧರಿಸುವ ಧೋರಣೆ ಹೆಚ್ಚಾಗಿದೆ. ಆ ಕನಸು ಕಸಿದುಕೊಂಡಾಗ ಉಂಟಾಗುವ ಕಹಿ ನೋವು ಗೀಳಾಗಿ ಮಾರ್ಪಟ್ಟು, ಆಕೆಯನ್ನು ಮಾನಸಿಕ ಕುಸಿತಕ್ಕೆ ತಳ್ಳುತ್ತದೆ. ಇಷ್ಟು ಆಳವಾದ ಶೂನ್ಯತೆಯಿರುವ ಪಾತ್ರ ನಿರ್ವಹಿಸಿದ ನಂತರ ಇತರರನ್ನು ತೀರ್ಮಾನಿಸುವುದನ್ನು ನಿಲ್ಲಿಸಲು ಕಲಿಯುತ್ತೇವೆ. ಪ್ರತಿಯೊಬ್ಬರೂ ನಮಗೆ ಕಾಣದ ಯಾವುದೋ ಮೌನ ನೋವನ್ನು ಹೊತ್ತು ಬದುಕುತ್ತಿರುತ್ತಾರೆ ಎಂಬ ಸತ್ಯ ಅರಿವಾಗುತ್ತದೆ. ಚಿತ್ರದಲ್ಲಿ ಸಾಂಪ್ರದಾಯಿಕ ಹಾರರ್ ಶಬ್ದಗಳ ಬದಲಾಗಿ ಯಕ್ಷಗಾನದ ಕಾಲ್ಗೆಜ್ಜೆಯ ಸದ್ದನ್ನೇ ಭಯದ ಸಂಕೇತವಾಗಿ ಬಳಸಿಕೊಂಡಿರುವುದು ವಿಶಿಷ್ಟ ಅನುಭವ” ಎಂದು ಹಂಚಿಕೊಂಡರು.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ವೈ. ರವಿಶಂಕರ್ ಮತ್ತು ನವೀನ್ ಯೆರ್ನೇನಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಕೀರ್ತನ್ ನಾಡಗೌಡ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಚೈತ್ರಾ ಜೆ. ಆಚಾರ್ ಜೊತೆಗೆ ರಮೇಶ್ ಇಂದಿರಾ, ಪ್ರೀತಿ ಪಗಡಾಲ, ಶ್ರೀಕಾಂತ್ ಗಣೇಶ್, ಸೂರ್ಯ ರಾಜ್, ಚರಣ್ ಲಕ್ಕರಾಜು, ಶ್ರೀ ವೈಷ್ಣವ್, ಶಶಾಂಕ್ ಪಾಟೀಲ್, ರೇಖಾ ನಿರೋಷಾ, ವಾಣಿ ಶಾಲಿನಿ ಮತ್ತು ಹನುಮಂತ ರೆಡ್ಡಿ ನಟಿಸಿದ್ದಾರೆ. ದಿನೇಶ್ ದಿವಾಕರನ್ ಅವರ ಛಾಯಾಗ್ರಹಣ, ಅಕುಲ್ ಅವಿನಾಶ್ ಸಂಕಲನ ಹಾಗೂ ವೆಂಕಿ ಜಿ.ಜಿ. ಅವರ ಹಿನ್ನೆಲೆ ಸಂಗೀತ ಚಿತ್ರದ ಹಾರರ್ ವಾತಾವರಣವನ್ನು ಮತ್ತಷ್ಟು ದಟ್ಟವಾಗಿಸಿದ್ದು, ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ.






Be the first to comment