ಗಾಯಕ ಮೆಹಂದಿಗೆ ವೇದಿಕೆಯಲ್ಲೇ ಕ್ಲಾಸ್

‘ಬೋಲೋ ತರರಾರಾ’ ಹಾಡಿನ ಮೂಲಕ ಪಂಜಾಬ್ ನ ಬಾಂಗ್ರಾ ನೃತ್ಯವನ್ನು ವಿಶ್ವವಿಖ್ಯಾತ ಮಾಡಿದ ಮಾಡಿದ್ದ ಗಾಯಕ ದಲೇರ್ ಮೆಹಂದಿಗೆ ಕಾರ್ಯಕ್ರಮವೊಂದರಲ್ಲಿ ಸಚಿವರೊಬ್ಬರು   ತರಾಟೆಗೆ ತೆಗೆದುಕೊಂಡ ಘಟನೆ  ವರದಿಯಾಗಿದೆ.

ಉತ್ತರಾಖಂಡದ ಟೆಹ್ರಿ ಜಿಲ್ಲೆಯಲ್ಲಿ ನಡೆದ ‘ಕುಂಜಪುರಿ ಮೇಳದಲ್ಲಿ’  ಜನಪ್ರಿಯ ಪಂಜಾಬಿ ಗಾಯಕ ದಲೇರ್ ಮೆಹಂದಿ ಪ್ರದರ್ಶನ ನೀಡುತ್ತಿದ್ದರು. ಆದರೆ ಮೆಹಂದಿ ಅವರು ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ  ವೇದಿಕೆಯ ಮೇಲೆ ಉತ್ತರಾಖಂಡ ಸಚಿವ ಸುಬೋಧ್ ಉನಿಯಾಲ್  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಮೆಹಂದಿಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದರು.

‘ನಿಮಗೆ ಸರಿಯಾಗಿ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದು ಹೇಗೆ?” ಎಂದು ಪ್ರಶ್ನಿಸಿದರು. ‘ಈ ಕಾರ್ಯಕ್ರಮ  ದುರ್ಗಾ ದೇವಿಯ ಆರಾಧನೆಗೆ ಮೀಸಲಾದದ್ದು. ಮದ್ಯಪಾನದ ಅಮಲಿನಲ್ಲಿ ಪ್ರದರ್ಶನ ನೀಡುವುದು ಸೂಕ್ತವಲ್ಲ. ಈ ಆಚರಣೆಯು ಧಾರ್ಮಿಕ ಸ್ವರೂಪದ್ದಾಗಿರುವುದರಿಂದ ಕಲಾವಿದರು ಈ ಸಂದರ್ಭದ ಘನತೆ ಮತ್ತು ಮರ್ಯಾದೆಯನ್ನು ಗೌರವಿಸಬೇಕು’ ಎಂದು ಮೆಹಂದಿ ಅವರಿಗೆ ತಿಳಿಸಿದರು.

‘ನಮ್ಮ ಜನರಿಗೆ ಮನರಂಜನೆ ಸಿಗಲಿ ಎಂದು ನಾವು ನಿಮ್ಮನ್ನು ಕರೆಸಿದ್ದೆವು. ಆದರೆ ನೀವು ನಮ್ಮನ್ನೇ ಮೂರ್ಖರನ್ನಾಗಿಸುತ್ತಿದ್ದೀರಿ. ಇದು ತಪ್ಪು. ನಿಮಗೆ ದೊಡ್ಡ ಹೆಸರಿದೆ. ನಾವು ಅದನ್ನು ಗೌರವಿಸುತ್ತೇವೆ. ಆ ದೊಡ್ಡ ಹೆಸರಿಗಾಗಿ ನಿಮ್ಮನ್ನು ಇಲ್ಲಿಗೆ ಕರೆಯಲಾಗಿತ್ತು.” ಎಂದು   ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮೆಹಂದಿ ಅವರು ಮಧ್ಯಪ್ರವೇಶಿಸಿ, “ಸರ್, ಕೈಮುಗಿದು ಕೇಳಿಕೊಳ್ಳುತ್ತೇನೆ ದಯವಿಟ್ಟು ವೇದಿಕೆಯಿಂದ ಕೆಳಗಿಳಿಯಿರಿ,” ಎಂದು ಹೇಳಿದ್ದಾರೆ. ಬಳಿಕ ಜೊತೆಯಲ್ಲಿದ್ದವರು ಸಚಿವರನ್ನು ವೇದಿಕೆಯಿಂದ ಕೆಳಗಿಳಿಸಿದ್ದು ವಿಡಿಯೋದಲ್ಲಿ ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!