ಸ್ಯಾಂಡಲ್ವುಡ್ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆ. ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬವಿದ್ದು, ಇದೇ ವಿಶೇಷ ಸಂದರ್ಭದಲ್ಲಿ ಅವರ ನೂತನ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಲಿದೆ. ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಈ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಮೂಡಿಸುವಂತಹ ವಿಶೇಷ ಪೋಸ್ಟರ್ ಹಾಗೂ ಸಾಲುಗಳನ್ನು ಹಂಚಿಕೊಂಡಿದೆ.
“ಹೃದಯವೊಂದು ಕಥೆಯನ್ನು ಹೇಳಲು ಬಯಸಿದೆ, ಅದು ಹೆಚ್ಚು ಕಾಲ ಮೌನವಾಗಿರುವುದಿಲ್ಲ… ಎರಡು ಹೆಸರುಗಳು, ಭಾವಪೂರ್ಣವಾದ ಒಂದು ಒಗ್ಗೂಡುವಿಕೆ; ಆ ಕಥೆಗೆ ಜೀವ ತುಂಬಲು ಒಂದಾಗುತ್ತಿದ್ದಾರೆ!” ಎಂದು ಬರೆಯುವ ಮೂಲಕ ಚಿತ್ರತಂಡ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇದುವರೆಗೂ ಮಾಸ್ ಮತ್ತು ಹೈ-ವೋಲ್ಟೇಜ್ ಆಕ್ಷನ್ ಪಾತ್ರಗಳಲ್ಲೇ ಅಬ್ಬರಿಸುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಸಂಪೂರ್ಣ ಭಿನ್ನವಾದ ಎಮೋಷನಲ್ ಅಥವಾ ಫೀಲ್ಗುಡ್ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ಖ್ಯಾತ ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್ ಅವರ ನೇತೃತ್ವದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆದ ಪ್ರಮುಖ ಬ್ಯಾನರ್ಗಳಲ್ಲಿ ಒಂದಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿರುವ ಈ ಸಂಸ್ಥೆ, ಈಗಾಗಲೇ ಕನ್ನಡದಲ್ಲೂ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಾ ಸೈ ಎನಿಸಿಕೊಂಡಿದೆ. ಗುಣಮಟ್ಟದ ಮೇಕಿಂಗ್ ಹಾಗೂ ಭರ್ಜರಿ ತಾಂತ್ರಿಕ ಮೌಲ್ಯಗಳಿಗೆ ಹೆಸರಾಗಿರುವ ಈ ಸಂಸ್ಥೆಯು, ಧ್ರುವ ಸರ್ಜಾ ಅವರ ಜೊತೆ ಕೈಜೋಡಿಸಿರುವುದು ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಈ ಚಿತ್ರದ ನಿರ್ದೇಶಕರು ಯಾರು, ತಾರಾಗಣದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲೇ ಅಧಿಕೃತವಾಗಿ ಚಿತ್ರತಂಡ ಬಿಡುಗಡೆ ಮಾಡಲಿದೆ.





Be the first to comment