ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮೀಪುತ್ರ’ ಚಿತ್ರದ ವಿಶೇಷ ‘ಅಮ್ಮನ ಹಾಡು’ ಹಾಗೂ ಹೊಸ ಪೋಸ್ಟರ್ ಅನಾವರಣಗೊಂಡಿದೆ.
ಕಾರ್ಯಕ್ರಮದಲ್ಲಿ ಚಿತ್ರತಂಡ ಸಿನಿಮಾದ ಹುಟ್ಟು, ಶೀರ್ಷಿಕೆಯ ಹಿನ್ನೆಲೆ ಹಾಗೂ ತಾಯಿಯ ಮಹತ್ವದ ಬಗ್ಗೆ ಮಾತನಾಡಿತು.
“ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ‘ಅವನೊಬ್ಬ ಲಕ್ಷ್ಮೀಪುತ್ರ ಕಣ್ರೋ’ ಎಂದು ಕರೆಯುವುದನ್ನು ಕೇಳಿದ್ದೆವು. ಕಥೆ ರೆಡಿಯಾದಾಗ ಮೊದಲು ‘ಗೌರಿಪುತ್ರ’ ಎಂಬ ಹೆಸರು ಚರ್ಚೆಗೆ ಬಂತು. ಆದರೆ ಗೌರಿಪುತ್ರ ಎಂದರೆ ಗಣೇಶನಾಗುತ್ತಾನೆ ಎಂಬ ಕಾರಣಕ್ಕೆ ಕೊನೆಗೆ ‘ಲಕ್ಷ್ಮೀಪುತ್ರ’ ಎಂದು ಅಂತಿಮಗೊಳಿಸಿದೆವು. ಇಲ್ಲಿ ಲಕ್ಷ್ಮಿ ಎಂದರೆ ದುಡ್ಡಲ್ಲ. ಸಿನಿಮಾದಲ್ಲಿ ತಾಯಿಯ ಹೆಸರು ಲಕ್ಷ್ಮಿ. ಆ ಪಾತ್ರವನ್ನು ನಟಿ ತಾರಾ ಅವರೇ ನಿರ್ವಹಿಸಿದ್ದಾರೆ. ಅವರು ಒಪ್ಪದಿದ್ದರೆ ಈ ಪ್ರಾಜೆಕ್ಟ್ ಮಾಡುತ್ತಲೇ ಇರಲಿಲ್ಲ. ಕೊರೊನಾ ಸಮಯದಲ್ಲಿ ಚಿಕ್ಕಣ್ಣ ಜೊತೆ ಊಟಕ್ಕೆ ಕುಳಿತಾಗ ಹುಟ್ಟಿಕೊಂಡ ಲೈನ್ ಇದು. ‘ಉಪಾಧ್ಯಕ್ಷ’ ಚಿತ್ರದ ನಂತರ ಚಿಕ್ಕಣ್ಣ ಕರೆ ಮಾಡಿ ನೆನಪಿಸಿದಾಗ ಈ ಸಿನಿಮಾ ಸೆಟ್ಟೇರಿತು” ಎಂದು ಸ್ಕ್ರಿಪ್ಟ್ ಜೊತೆಗೆ ಹಾಡುಗಳಿಗೆ ಸಾಹಿತ್ಯ ಬರೆದ ಎ.ಪಿ. ಅರ್ಜುನ್ ತಿಳಿಸಿದರು.
”ಅರ್ಜುನ್ ಹೇಳಿದ ಈ ಹಳ್ಳಿ ಸೊಗಡಿನ ಅಮ್ಮ-ಮಗನ ಕಥೆ ನನಗೆ ತೃಪ್ತಿ ಕೊಟ್ಟಿತ್ತು. ‘ಕಿರಾತಕ’ ಚಿತ್ರದ ಬಳಿಕ ನಾನು ತಾರಮ್ಮ ಜೊತೆ ನಟಿಸಿರಲಿಲ್ಲ. ರಾಷ್ಟ್ರ ಪ್ರಶಸ್ತಿ ವಿಜೇತ ತಾರಮ್ಮನ ಮುಂದೆ ನಟಿಸುತ್ತಿದ್ದೀಯಾ, ಅವರು ನಿನ್ನನ್ನು ಆಕ್ಟಿಂಗ್‌ನಲ್ಲಿ ತಿಂದು ಹಾಕಿಬಿಡುತ್ತಾರೆ ಎಂದು ಹಲವರು ಹೆದರಿಸಿದ್ದರು. ಆದರೆ ಅವರು ತೆರೆಮೇಲೆ ಪ್ರತಿಯೊಬ್ಬ ಕಲಾವಿದನಿಗೂ ಸಮಾನ ಜಾಗ ಕೊಡುತ್ತಾರೆ. ನಮ್ಮಿಬ್ಬರ ಕಾಂಬಿನೇಷನ್ ತಾಯಿ-ಮಗನಂತೆ ಅದ್ಭುತವಾಗಿ ಮೂಡಿಬಂದಿದೆ” ಎಂದರು ಚಿಕ್ಕಣ್ಣ.
ಅಮ್ಮನ ಹಾಡು ವೀಕ್ಷಿಸಿದ ಬಳಿಕ ನಟಿ ತಾರಾ ಭಾವುಕರಾದರು. “ನನ್ನ ತಾಯಿ ಪುಷ್ಪಮ್ಮ ಹಾಗೂ ದೊಡ್ಡಮ್ಮ ಲೀಲಮ್ಮ ನನ್ನ ಬದುಕಿನ ಶಕ್ತಿ. ಎಷ್ಟೇ ವಯಸ್ಸಾದರೂ ತಾಯಿಗೆ ನಾವೆಲ್ಲ ಮಕ್ಕಳೇ. ಹೊರಗಡೆ ಎಷ್ಟೇ ನೋವು, ಕೋಪ, ಅವಮಾನಗಳಾದರೂ ನಾವು ಮನೆಗೆ ಬಂದು ಕೂಗಾಡುವುದು ಅಮ್ಮನ ಮೇಲೆಯೇ. ಆದರೆ ತಾಯಿ ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳದೆ ಪ್ರೀತಿಯಿಂದ ಊಟ ಬಡಿಸುತ್ತಾಳೆ. ಆ ತಾಯಿಯ ಪ್ರೀತಿಗೆ ಯಾವುದೂ ಸಾಟಿಯಿಲ್ಲ” ಎಂದರು.
ಹಾಡಿನಲ್ಲಿ ಹಿರಿಯ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅನಂತ್ ನಾಗ್ ಅವರ ತಾಯಂದಿರ ಅಪರೂಪದ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪೋಸ್ಟರ್ ಅನಾವರಣಗೊಳಿಸಲಾಯಿತು ಚಿತ್ರವನ್ನು ಅನ್ನಪೂರ್ಣ ಎ ಪಿ ಅರ್ಜುನ್ ನಿರ್ಮಾಣ ಮಾಡಿದ್ದಾರೆ.ರವಿಕಿರಣ್ ಎಂ. ಗೌಡ ಸಹ ನಿರ್ಮಾಪಕರಾಗಿದ್ದಾರೆ.
‘ಲಕ್ಷ್ಮೀಪುತ್ರ’ ಚಿತ್ರ ನವೆಂಬರ್ 27ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.





Be the first to comment