‘ರಿಯಲ್ ಸ್ಟಾರ್’ ಉಪೇಂದ್ರ ಅವರ ಹೊಸ ಚಿತ್ರ ‘ನೆಕ್ಸ್ಟ್ ಲೆವೆಲ್’ ಸಿನಿಮಾದ ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರಕ್ಕೆ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ವಿಭಿನ್ನ ವಿನ್ಯಾಸದಿಂದ ಕೂಡಿದ್ದು, ಸಿನಿಪ್ರಿಯರಲ್ಲಿ ಚರ್ಚೆ ಹುಟ್ಟುಹಾಕಿದೆ. ಚಿತ್ರದ ಪೋಸ್ಟರ್ ಶೈಲಿಯನ್ನು ಗಮನಿಸಿದರೆ ಇದೊಂದು ಫ್ಯಾಂಟಸಿ ಜಾನರ್‌ನ ಕಥೆಯೇ ಅಥವಾ ಇಂದಿನ ತಂತ್ರಜ್ಞಾನ ಆಧಾರಿತ ಗೇಮಿಂಗ್ ಹಿನ್ನೆಲೆಯುಳ್ಳ ಸಿನಿಮಾವೇ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ.
ಬೆಂಗಳೂರಿನ ಪ್ರಸಿದ್ಧ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಮುಗ್ಧ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ನಟಿ ಆರಾಧನಾ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಅತ್ಯಂತ ಗ್ಲಾಮರಸ್ ಹಾಗೂ ಬೋಲ್ಡ್ ಅವತಾರದಲ್ಲಿ ಮುಖ್ಯಮಂತ್ರಿಯ ಮಗಳ ಪ್ರಭಾವಿ ಪಾತ್ರಕ್ಕೆ ಜೀವ ತುಂಬುತ್ತಿರುವುದು ವಿಶೇಷ.
ಇದರ ಜೊತೆಗೆ ಉಪೇಂದ್ರ ಅವರ ಅಣ್ಣನ ಪುತ್ರ, ಯುವ ನಟ ನಿರಂಜನ್ ಸುಧೀಂದ್ರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಚಿಕ್ಕಪ್ಪನ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
‘ವಿಕ್ಟರಿ-2’ ಹಾಗೂ ‘ಛೂ ಮಂತರ್’ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ತಮ್ಮ ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಉಪೇಂದ್ರ ಅವರ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಾದ ‘ಎ’, ‘ಉಪೇಂದ್ರ’ ಹಾಗೂ ‘ರಕ್ತಕಣ್ಣೀರು’ ಚಿತ್ರಗಳ ಸಾರ, ತತ್ವ ಹಾಗೂ ಆಲೋಚನಾ ಶೈಲಿಯನ್ನು ಹೊತ್ತಿರುವ ಈ ಕಥೆಯನ್ನು, ಇಂದಿನ ಜನರೇಷನ್ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವಿಶಿಷ್ಟವಾಗಿ ಹೆಣೆಯಲಾಗಿದೆ.

—–





Be the first to comment