ಪಾ. ರಂಜಿತ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ‘ವೆಟ್ಟುವಮ್’ ಚಿತ್ರದ ಕನ್ನಡ ಆವೃತ್ತಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಿದ್ದಾರೆ.
ಪ್ಯಾನ್ ಇಂಡಿಯಾ ಅಪೋಕ್ಯಾಲಿಪ್ಟಿಕ್ ಆಕ್ಷನ್ ಸಿನಿಮಾ ‘ವೆಟ್ಟುವಮ್’ ನ ಕಾಲ್ಪನಿಕ ಜಗತ್ತನ್ನು ಪರಿಚಯಿಸುವ ‘ವರ್ಲ್ಡ್ ಆಫ್ ವೆಟ್ಟುವಮ್’ ವಿಡಿಯೋ ಬಿಡುಗಡೆಯಾಗಿದೆ. ಪರಿಚಯಾತ್ಮಕ ವಿಡಿಯೋ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದು, ಬಹುಭಾಷಾ ಸೂಪರ್ಸ್ಟಾರ್ಗಳ ಧ್ವನಿ ಚಿತ್ರಕ್ಕೆ ಸಿಕ್ಕಿದೆ. ಕನ್ನಡ ಆವೃತ್ತಿಗೆ ಕಿಚ್ಚ ಸುದೀಪ್ , ಹಿಂದಿ ಆವೃತ್ತಿಗೆ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ, ಮಲಯಾಳಂಗೆ ಸೌಬಿನ್ ಶಾಹಿರ್ ಹಾಗೂ ತಮಿಳು ಆವೃತ್ತಿಗೆ ಸ್ವತಃ ನಿರ್ದೇಶಕ ಪಾ. ರಂಜಿತ್ ಧ್ವನಿ ನೀಡಿದ್ದಾರೆ.
ಅಪೋಕ್ಯಾಲಿಪ್ಟಿಕ್ ವಿಶಿಷ್ಟ ಕಲ್ಪನೆಯ ಹಿನ್ನೆಲೆಯಲ್ಲಿ ಚಿತ್ರದ ಕಥಾಹಂದರ ಸಾಗಲಿದೆ. ವಿವಿಧ ಪ್ರಬಲ ಗುಂಪುಗಳ ನಡುವಿನ ಅಧಿಕಾರದ ಸ್ಪರ್ಧೆ, ಭೀಕರ ಸಂಘರ್ಷ ಹಾಗೂ ಅನಿರೀಕ್ಷಿತ ತಿರುವುಗಳ ಸುತ್ತ ಹೆಣೆಯಲಾದ ಕಥೆ ಅದ್ಭುತ ದೃಶ್ಯ ವೈಭವ ಹಾಗೂ ಮೈನವಿರೇಳಿಸುವ ಹೈ-ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿದೆ. ಭಾರತೀಯ ಸಾಂಪ್ರದಾಯಿಕ ಸಮರ ಕಲೆಗಳಾದ ‘ಅಡಿಮುರೈ’ ಮತ್ತು ‘ಮಲ್ಲಕಂಬ’ ಕೌಶಲಗಳನ್ನು ಆಧರಿಸಿ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.
ಚಿತ್ರದಲ್ಲಿ ಆರ್ಯ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲ, ಕಲೈಯರಸನ್ ಮುಂತಾದ ದಕ್ಷಿಣ ಭಾರತದ ಪ್ರತಿಭಾವಂತ ತಾರಾಗಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಚಿತ್ರಕ್ಕೆ ಎಸ್.ಎಸ್. ಮೂರ್ತಿ ಕಲಾ ನಿರ್ದೇಶನ, ರೂಪೇಶ್ ಶಾಜಿ ಛಾಯಾಗ್ರಹಣ, ಸೆಲ್ವ ಆರ್.ಕೆ. ಸಂಕಲನ, ದಿಲೀಪ್ ಸುಬ್ಬರಾಯನ್ ಸಾಹಸ ನಿರ್ದೇಶನ, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ.
ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ವೆಟ್ಟುವಮ್’ ಚಿತ್ರದ ಫಸ್ಟ್ ಲುಕ್ ಅನಾವರಣಕ್ಕಾಗಿ ಚಿತ್ರರಂಗ ಕಾತರದಿಂದ ಕಾಯುತ್ತಿದೆ.
—-





Be the first to comment