ಡಾ. ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಜಗಮೆಚ್ಚಿದ ಮಗ’ ಆಧುನಿಕ ತಂತ್ರಜ್ಞಾನದಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕಲರ್ ನಲ್ಲಿ ಬಿಡುಗಡೆಯಾಗಲಿದೆ.
ನಿರ್ಮಾಪಕ ಹಾಗೂ ವಿತರಕರಾಗಿ 4 ದಶಕಗಳಿಂದ ಚಿತ್ರರಂಗದಲ್ಲಿರುವ ಎಸ್ ಉದಯಶಂಕರ್ ಅವರು ‘ಜಗಮೆಚ್ಚಿದ ಮಗ’ ಚಿತ್ರವನ್ನು ಕಲರ್ ನಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರ ಹೊಸ ರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
‘ನಾನು ಡಾ. ರಾಜಕುಮಾರ್ ಅವರ ಅಭಿಮಾನಿ. 1972ರಲ್ಲಿ ತೆರೆಕಂಡ ಭಾವನಾರಾಯಣ್ ಅವರು ನಿರ್ಮಾಣ ಮಾಡಿದ್ದ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಹಾಗೂ ಡಾ.ರಾಜಕುಮಾರ್, ಭಾರತಿ, ಕೆ.ಎಸ್ ಅಶ್ವತ್, ಎಂ.ವಿ.ರಾಜಮ್ಮ, ನರಸಿಂಹರಾಜು ಮುಂತಾದವರು ಅಭಿನಯಿಸಿದ್ದ’ಜಗಮೆಚ್ಚಿದ ಮಗ’ ಕಪ್ಪು ಬಿಳುಪಿನ ಚಿತ್ರವನ್ನು ಸಿನಿಮಾಸ್ಕೋಪ್ ಚಿತ್ರವಾಗಿಸಿ 5.1 ಸೌಂಡ್ ಎಫೆಕ್ಟ್ ಅಳವಡಿಸಿ ಈಗಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಸಿದ್ದಮಾಡಿ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ’ ಎಂದು ಎಸ್ ಉದಯಶಂಕರ್ ತಿಳಿಸಿದ್ದಾರೆ.
ಈವರೆಗೂ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳು ಕಲರ್ ನಲ್ಲಿ ಬಿಡುಗಡೆಯಾಗಿದ್ದವು. ಮುಂದೆ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನು ಕಲರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ‘ಜಗಮೆಚ್ಚಿದ ಮಗ’ ಚಿತ್ರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವುದು ನನ್ನ ಹಲವು ವರ್ಷಗಳ ಕನಸು. 50 ವರ್ಷಗಳ ಹಿಂದಿನ ಕಪ್ಪು ಬಿಳುಪಿನ ಚಿತ್ರವನ್ನು ಈಗಿನ ಆಧುನಿಕ ರೀತಿಗೆ ಬದಲಿಸುವುದು ಅಷ್ಟು ಸುಲಭವಲ್ಲ. ಒಂದುವರೆ ವರ್ಷಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳೆಲ್ಲಾ ನಡೆದಿದೆ. ಈಗ ಚಿತ್ರ ಹೊಸರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ಉದಯಶಂಕರ್ ಹೇಳಿದ್ದಾರೆ.
—-





Be the first to comment