ವಿಭಿನ್ನ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ‘ಗಣಪತಿ ಬಪ್ಪ ಮೋರಿಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಟೈಟಲ್ ಜೊತೆಗೆ ಆಕರ್ಷಕ ಫಸ್ಟ್ ಲುಕ್ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ.
ಹೊಸತನದಿಂದ ಕೂಡಿರುವ ಪೋಸ್ಟರ್ ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚಿತ್ರ ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿ ಬರಲಿದೆ. ಕಥೆಯ ಗಟ್ಟಿತನಕ್ಕಾಗಿ ಚಿತ್ರತಂಡ ಎರಡು ವರ್ಷಗಳ ಕಾಲ ಪ್ರಿ-ಪ್ರೊಡಕ್ಷನ್ ನಡೆಸಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಎರಡನೇ ಹಂತದ ಶೂಟಿಂಗ್ ಸಾಗಲಿದೆ.
ಚಿತ್ರದಲ್ಲಿ ಯುವ ತಾರಾಗಣವಿದ್ದು, ‘ಮನದ ಕಡಲು’ ಸುಮುಖ, ‘ಟಾಮ್ ಅಂಡ್ ಜೆರಿ’ ಖ್ಯಾತಿಯ ನಿಶ್ಚಿತ್ ಕರೋಡಿ, ‘ಬಿಂಗೋ’ ಚಿತ್ರದ ಚಂದನ್ ಆರ್.ಕೆ , ‘ಕಾಮಿಡಿ ಕಿಲಾಡಿಗಳು’ ಸೂರಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ತೆಲುಗು ನಟಿ ಬಾಂಧವಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಡಿಷನ್ ಮೂಲಕ ರಾಜ್ಯಾದ್ಯಂತ ಆಯ್ಕೆಯಾದ ಹೊಸ ಪ್ರತಿಭೆಗಳಿಗೂ ಚಿತ್ರದಲ್ಲಿ ಅವಕಾಶ ನೀಡಲಾಗಿದೆ.
ಹೊಸ ಪ್ರತಿಭೆ ಸಂಜಯ್ ಕೆ. ಕೆ. ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವಣ್ಣ ಅಭಿನಯದ ‘ಘೋಸ್ಟ್’ ಚಿತ್ರಕ್ಕೆ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದ ಪ್ರಸನ್ನ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ‘ಮರ್ಫಿ’ ಖ್ಯಾತಿಯ ಆನಂದ್ ಮೀನಾಕ್ಷಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.
‘ಕಾಟೇರ’ ಖ್ಯಾತಿಯ ಗುಣ ಪ್ರೊಡಕ್ಷನ್ ಡಿಸೈನರ್ , ಮಹೇಶ್ ತೊಗಟ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರವನ್ನು ‘ರಾಯಲ್ ಫ್ಲೈ ಎಂಟರ್ಟೈನ್ಮೆಂಟ್ಸ್’ ಬ್ಯಾನರ್ ಅಡಿಯಲ್ಲಿ ಲಾರೆನ್ಸ್ ಜೋಸೆಫ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
—–





Be the first to comment