ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯನ್ ಕಾಂಬಿನೇಷನ್ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಪರಾಕ್ರಮಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಪತ್ನಿ ‘ಜಯಮ್ಮ’ನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ನ ಖ್ಯಾತ ನಟ ಅರ್ನಾಲ್ಡ್ ವೋಸ್ಲೂ ಚಿತ್ರದಲ್ಲಿ ಖಳನಾಯಕನಾಗಿ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಜೊತೆಯಾಗಿ ಮಿಂಚಿದ್ದ ವಿಜಯ್ ಮತ್ತು ರಶ್ಮಿಕಾ, ಈ ಚಿತ್ರದ ಮೂಲಕ ಮೂರನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ದಂಪತಿಯಾದ ನಂತರ ಈ ಜೋಡಿಯಿಂದ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.
1854 ರಿಂದ 1878ರ ನಡುವಿನ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ರಾಯಲಸೀಮೆ ಪ್ರಾಂತ್ಯದಲ್ಲಿ ನಡೆದ ರೋಚಕ ನೈಜ ಘಟನೆಗಳನ್ನು ಆಧರಿಸಿ ಈ ಪಿರಿಯಾಡಿಕ್ ಡ್ರಾಮಾವನ್ನು ತೆರೆಗೆ ತರಲಾಗುತ್ತಿದೆ. ಟಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ಚಿತ್ರ ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್ ನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ಜೋಡಿ ಅಜಯ್-ಅತುಲ್ ಶಕ್ತಿಶಾಲಿ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿವೆ.
—–





Be the first to comment