ಟಾಕ್ಸಿಕ್

Movie Review: ಮಾಯದ ಜಗತ್ತಿನಲ್ಲಿ ರಾಯನ ತಾಕತ್ತು

ಚಿತ್ರ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್ ದಾಸ್
ನಿರ್ಮಾಣ: ಮಾನ್‌ಸ್ಟರ್ ಮೈಂಡ್ ಸೆಟ್, ಕೆ.ವಿ.ಎನ್
ತಾರಾಗಣ: ಯಶ್, ನಯನ್ ತಾರಾ ಮೊದಲಾದವರು…
ರೇಟಿಂಗ್ : 4/5

ದೊಡ್ಡದೊಂದು ಗ್ಯಾಪ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಚಿತ್ರವಾಗಿ ಟಾಕ್ಸಿಕ್ ಬಹು ನಿರೀಕ್ಷೆ ಮೂಡಿಸಿತ್ತು. ಅಂಥ ಎಲ್ಲ ನಿರೀಕ್ಷೆಗಳನ್ನು ಪೂರ್ತಿ ಮಾಡುವ ರೀತಿಯಲ್ಲಿ ಅದ್ಭುತವಾಗಿ ತೆರೆಗೆ ಬಂದಿದೆ ಟಾಕ್ಸಿಕ್.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗೋವಾವು ಪೋರ್ಚುಗೀಸರಿಂದ ಮುಕ್ತಗೊಂಡಿರುವುದಿಲ್ಲ. ಇಂಥ ಸಂದರ್ಭದಲ್ಲಿ ಅಲ್ಲಿನ ಹಲವಾರು ಮಕ್ಕಳು‌ ಗುಲಾಮಗಿರಿಗೆ ಒಳಗಾಗುತ್ತಾರೆ. ಅವರಲ್ಲಿ ಗಂಗಾ ಮತ್ತು ರಾಯ ಎನ್ನುವ ಪುಟ್ಟ ಅಕ್ಕ ತಮ್ಮ ಕೂಡ ಸೇರಿರುತ್ತಾರೆ. ಗುಲಾಮಗಿರಿಯಿಂದ ಹೊರಬಂದು ಆ ನಾಡನ್ನೇ ಆಳಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ತಮ್ಮನಲ್ಲಿ ತುಂಬುತ್ತಾಳೆ ಅಕ್ಕ. ಬೆಳೆದು ನಿಂತ ಅಕ್ಕನಾಗಿ ನಯನ್ ತಾರಾ ಮತ್ತು ಡಾನ್ ನಂತೆ ಬೆಳೆದು ನಿಲ್ಲುವ ರಾಯನಾಗಿ ಯಶ್ ವಿಜೃಂಭಿಸಿದ್ದಾರೆ.

ಯಶ್ ಅವರಿಗೆ ಈ ಚಿತ್ರದಲ್ಲಿ ವಿವಿಧ ಭಾವಗಳನ್ನು ಬಿಂಬಿಸಬಲ್ಲ ಪಾತ್ರವನ್ನು ನಿರ್ವಹಿಸುವ ಅವಕಾಶ ಇದೆ.‌ ಅದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆ್ಯಕ್ಷನ್, ರೊಮಾನ್ಸ್, ಹೀರೋಗಿರಿ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಯಶ್ ನಟನೆ ಎದ್ದು ಕಾಣುವಂತಿದೆ. ರಾಯನಾಗಿ ವಯಸ್ಸಾಗಿಯೂ ಕಾಣಿಸುತ್ತಾರೆ. ಮತ್ತು ಟಿಕೆಟ್ ಎನ್ನುವ ಪಾತ್ರದಲ್ಲಿ ವಿಭಿನ್ನ ಯುವಕನಾಗಿದ್ದಾರೆ.‌

ಈ ಅಕ್ಕತಮ್ಮಂದಿರ ಪಾತ್ರದ ಹೊರತಾಗಿ ರಾಯ ಪ್ರಮುಖವಾಗಿ ಇಟ್ಟುಕೊಂಡವಳ ಒಂದು ಪಾತ್ರವೂ ಇದೆ. ನಾಡಿಯಾ ಎನ್ನುವ ಆ ಪಾತ್ರಕ್ಕೆ ಕಿಯಾರ ಅಡ್ವಾನಿ ಜೀವ ತುಂಬಿದ್ದಾರೆ. ಚಿತ್ರ ಮುಗಿದ ಬಳಿಕ ಕೂಡ ಈ ಮೂರು ಪಾತ್ರಗಳು ನಮ್ಮನ್ನು ಕಾಡುತ್ತಲೇ ಇರುತ್ತದೆ.

ಚಿತ್ರದ ಕ್ಲೈಮ್ಯಾಕ್ಸ್ ಹೊಸ ಕಥೆಯನ್ನೇ ಹೇಳುತ್ತದೆ. ಅದುವರೆಗಿನ ಕಥೆಯ ತೂಕ ಒಂದು ಮಟ್ಟಿಗಾದರೆ, ಕೊನೆಯ ತಿರುವಂತೂ ಮೈ ನವಿರೇಳಿಸುವಂತಿದೆ.‌ ಈಗಾಗಲೇ ಜನಪ್ರಿಯಗೊಂಡಿರುವ ಹಾಡುಗಳು ಚಿತ್ರದ ಮತ್ತೊಂದು ಪ್ರಮುಖ ಶಕ್ತಿ. ಆ್ಯಕ್ಷನ್ ದೃಶ್ಯಗಳನ್ನು ಕೂಡ ಕಾವ್ಯಮಯವಾಗಿಸಿರುವುದು ರಾಜೀವ್ ರವಿ ಛಾಯಾಗ್ರಹಣದ ಕೀರ್ತಿ.‌

ಇದು ಒಂದು ಆ್ಯಕ್ಷನ್ ಚಿತ್ರ ಮಾತ್ರವಲ್ಲ. ಸೈಕಲಾಜಿಕಲ್ ಥ್ರಿಲ್ಲರ್ ಕೂಡ ಹೌದು. ಪ್ರೀತಿ ಅಂದರೇನು? ತೆವಲು ಎಂದರೆ ಯಾವುದು? ಪಾಪ ಪ್ರಜ್ಞೆ ಎನ್ನುವುದು ಯಾವ ಮಟ್ಟಕ್ಕೆ ಕಾಡಬಲ್ಲದು ಎನ್ನುವುದನ್ನೆಲ್ಲ ಡಿಟೇಲಾಗಿ ಮನಮುಟ್ಡುವಂತೆ ತೋರಿಸಿದ ಕೀರ್ತಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ಸಲ್ಲುತ್ತದೆ. ಇಂಥದೊಂದು ಅಪರೂಪದ ಸಿನಿಮಾದ ವೀಕ್ಷಣೆ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕರ ಕನಸು.

Be the first to comment

Leave a Reply

Your email address will not be published. Required fields are marked *

Translate »
error: Content is protected !!