ಪ್ರಕಾಶ್ ರಾಜ್‌ಗೆ ಬಿಬಿಎಂಪಿಯಿಂದ ತಿರುಗೇಟು

ಪ್ರಕಾಶ್ ರಾಜ್ ಅವರು ನೋಂದಾಯಿತ ವಿಳಾಸದಲ್ಲಿ ವಾಸವಾಗಿರದ ಕಾರಣ ಅವರ ಹೆಸರನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದೆ ಎಂದು ಬೆಂಗಳೂರು  ನಗರ ಪಾಲಿಕೆ ತಿಳಿಸಿದೆ.

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ಆರೋಪಕ್ಕೆ ಬಿಬಿಎಂಪಿ   ಸ್ಪಷ್ಟನೆ ನೀಡಿದ್ದು, ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಚುನಾವಣಾ ಆಯೋಗದ ನಿಯಮಾನುಸಾರವೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಪ್ರಕಾಶ್ ರಾಜ್ ಅವರ ಆರೋಪದ ಬಗ್ಗೆ ಪಾಲಿಕೆ ಆಯುಕ್ತ ಜಗದೀಶ್  ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರ ಹೆಸರು ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಾರ್ಡನ್ ಅಪಾರ್ಟ್‌ಮೆಂಟ್ ವಿಳಾಸದಲ್ಲಿ ನೋಂದಣಿಯಾಗಿತ್ತು. ಆದರೆ ಬೂತ್ ಮಟ್ಟದ ಅಧಿಕಾರಿ  ಸ್ಥಳ ಪರಿಶೀಲನೆ ನಡೆಸಿದಾಗ, ಕಳೆದ ನಾಲ್ಕು ವರ್ಷಗಳಿಂದ ಅವರು ಆ ವಿಳಾಸದಲ್ಲಿ ವಾಸವಿಲ್ಲ ಎಂಬುದು ದೃಢಪಟ್ಟಿದೆ. ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ಪ್ರಾಪರ್ಟಿ ಮ್ಯಾನೇಜರ್ ನೀಡಿದ ಮಾಹಿತಿ ಮತ್ತು ಮಹಜರಿನ ಆಧಾರದ ಮೇಲೆ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅವರ ಹೆಸರನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ದಾಖಲಿಸಲಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಪಾಲಿಕೆ ಅಧಿಕಾರಿಗಳು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿದ್ದು, ಅವರು ಪ್ರಸ್ತುತ ಶಾಂತಿನಗರ ಕ್ಷೇತ್ರದ ವ್ಯಾಪ್ತಿಯ ಮತ್ತೊಂದು ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಹೊಸ ವಿಳಾಸದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ನಮೂನೆ-6 ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಚುನಾವಣಾ ಆಯೋಗದ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ  ತಿಳಿಸಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!