ತಮಿಳುನಾಡು ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ವಿರುದ್ಧ ಪತ್ನಿ ಸಂಗೀತ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸಂಗೀತ ಅವರು ಸ್ವಯಂಪ್ರೇರಿತವಾಗಿ ಹಿಂಪಡೆದಿದ್ದಾರೆ.
ಇದರೊಂದಿಗೆ ಕಳೆದ ಹಲವು ತಿಂಗಳುಗಳಿಂದ ಚರ್ಚೆಗೆ ಕಾರಣವಾಗಿದ್ದ ದಾಂಪತ್ಯ ವಿವಾದದ ಕಾನೂನು ಹೋರಾಟಕ್ಕೆ ಸದ್ಯ ತೆರೆ ಬಿದ್ದಿದೆ. ಫೆಬ್ರವರಿಯಲ್ಲಿ ಸಂಗೀತ ಅವರು ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಇದೆ ಎಂದು ಉಲ್ಲೇಖಿಸಿ ಅವರು, ಜೀವನಾಂಶ ಹಾಗೂ ಚೆನ್ನೈನ ನೀಲಂಕರೈನಲ್ಲಿರುವ ಜಂಟಿ ನಿವಾಸದಲ್ಲಿ ವಾಸಿಸಲು ಅವಕಾಶ ನೀಡುವಂತೆ ಕೋರಿದ್ದರು.
ಪ್ರಕರಣದ ವಿಚಾರಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಹಿಂದಿನ ಎಲ್ಲ ವಿಚಾರಣೆಗಳಲ್ಲಿಯೂ ವಿಜಯ್ ಮತ್ತು ಸಂಗೀತ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ವಕೀಲರೇ ಹಾಜರಾಗಿ ಸಮಯಾವಕಾಶ ಕೋರಿದ್ದರು. ಆಗಸ್ಟ್ 7ರಂದು ಮತ್ತೆ ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣದಲ್ಲಿ ಸಂಗೀತ ಅವರು ತಮ್ಮ ಅರ್ಜಿಯನ್ನು ಸ್ವಯಂಪ್ರೇರಿತವಾಗಿ ಹಿಂಪಡೆದಿದ್ದಾರೆ.
ಇದರಿಂದ ವಿಚ್ಛೇದನ ಪ್ರಕರಣ ಅಂತ್ಯಗೊಂಡಿದ್ದು, ದಾಂಪತ್ಯ ವಿವಾದದ ಕುರಿತ ಕಾನೂನು ಪ್ರಕ್ರಿಯೆ ಮುಕ್ತಾಯಗೊಂಡಂತಾಗಿದೆ.





Be the first to comment