ಸ್ಪಾರ್ಕ್

ಕಿಡಿ‌‌ ಹೊತ್ತಿಸಿದ ‘ಸ್ಪಾರ್ಕ್’ ಮೊದಲ‌ ಗೀತೆ..!

‘ಶಕಲಕ ಭುಂ‌ ಭೂಮ್..’ ಎಂದು ಆರಂಭವಾದ ಹಾಡು ಸುದ್ದಿಗೋಷ್ಠಿಯ ವೇದಿಕೆಯಲ್ಲಿ ‌ಕಿಚ್ಚು ಹತ್ತಿಸಿತು. ಕಾರಣ ಒಂದು ಕಡೆ ಹಾಡಿನಲ್ಲಿರುವ ಮೋಡಿ ಮತ್ತೊಂದೆಡೆ ಆ ಹಾಡಿಗೆ ಹೆಜ್ಜೆ ಹಾಕಿರುವ ಜೋಡಿ. ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ್ ಹೆಜ್ಜೆ ಹಾಕಿರುವ ಅದ್ಧೂರಿ ಹಾಡಿನ ಅನಾವರಣ ಸಮಾರಂಭ ಈ ಎಲ್ಲದಕ್ಕೂ ಸಾಕ್ಷಿಯಾಯಿತು.

ನಿರಂಜನ್ ಮತ್ತು ರಚನಾ ಇಂದರ್ ಮಸ್ತಾಗಿ ಕುಣಿದ ಗೀತೆ ನೋಡಿ ಸ್ಪಾರ್ಕ್ ನಲ್ಲಿ ಖಳನಾಗಿ ನಟಿಸಿರುವ ಪ್ರೇಮ್ ಮೆಚ್ಚಿ ಮಾತನಾಡಿದರು. ನಿರಂಜನ್ ನಮ್ಮ ಕನ್ನಡದ ಪ್ರತಿಭೆ. ಅವರನ್ನು ಪರಭಾಷೆಯವರು ಹೈಜಾಕ್ ಮಾಡುವ ಮೊದಲು, ಕನ್ನಡದ ನಿರ್ಮಾಪಕರು ಉಳಿಸಿಕೊಳ್ಳಬೇಕು. ಈ ಚಿತ್ರದ ನಿರ್ಮಾಪಕರು ಒಂದು ಹಾಲಿವುಡ್ ಸಿನಿಮಾ ಮಾಡುವಷ್ಟು ಜ್ಞಾನ ಮತ್ತು ಶ್ರೀಮಂತಿಕೆ ಇರುವವರು. ಆದರೆ ಕನ್ನಡದ ಯುವ ನಾಯಕನಿಗಾಗಿ ಹತ್ತಾರು ಕೋಟಿ ಹಾಕಿ ಚಿತ್ರ ಮಾಡಿರುವುದನ್ನು ಮೆಚ್ಚಲೇಬೇಕು ಎಂದರು.

ಸ್ಪಾರ್ಕ್ ನಲ್ಲಿ ನಾಯಕ ನಿರಂಜನ್ ಪತ್ರಕರ್ತನ‌ಪಾತ್ರದಲ್ಲಿದ್ದು ನ್ಯಾಯದ ಹೋರಾಟ ನಡೆಸುವ ಪಾತ್ರದಲ್ಲಿ ಪ್ರತ್ಯಕ್ಷಗೊಳ್ಳಲಿದ್ದಾರೆ.

ಸ್ಪಾರ್ಕ್

ಚಿತ್ರದ ನಾಯಕ‌ ನಿರಂಜನ್ ಮಾತನಾಡಿ, ಹಾಡನ್ನು ಉಪೇಂದ್ರ ಈಗಾಗಲೇ ಅವರಿಗೆ ತೋರಿಸಿದ ಬಗ್ಗೆ ಹೇಳಿಕೊಂಡರು.‌ “ಹಾಡು ಚಿಕ್ಕಪ್ಪನಿಗೆ ತೋರಿಸಿದೆ. ದೊಡ್ಡ ಸ್ಟಾರ್ ಗೆ ಸಿಗುವಂಥ ಹಾಡು ನಿನಗೆ ಸಿಕ್ಕಿದೆ ಎಂದರು. ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ಸಚಿನ್ ಅವರು ತುಂಬ ಕ್ರಿಯೇಟಿವ್ ಆಗಿ ಸಂಗೀತ ನೀಡಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ತುಂಬ ವೇಗವಾಗಿ ಚಿತ್ರೀಕರಣಗೊಂಡಂಥ ಸಿನಿಮಾ ಇದು. ಯಾಕೆಂದರೆ ಇದರ ಹಿನ್ನೆಲೆಯಲ್ಲಿ ಕಾರ್ಪೊರೇಟ್ ನಿರ್ಮಾಪಕರಿರುವುದೇ ಕಾರಣ” ಎಂದರು.

ನಿರಂಜನ್‌ಗೆ ಜೋಡಿಯಾಗಿರುವ ರಚನಾ ಇಂದರ್ ಮಾತನಾಡಿ, “ಇದು ನನ್ನ ಮೊದಲ‌ ಕಮರ್ಷಿಯಲ್ ಸಾಂಗ್” ಎಂದರು. ಜೊತೆಗೆ ಫಸ್ಟ್ ಟೈಮ್ ಇಷ್ಟು ಗ್ಲಾಮರಸ್ಸಾಗಿಯೂ ಕಾಣಿಸಿದ್ದೇನೆ ಎಂದರು.

ಸ್ಪಾರ್ಕ್ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡುತ್ತಾ, “ಇದು ಒಂದು ವರ್ಷದ ಪಯಣ. ನಾನು ಅಂದುಕೊಂಡಿದ್ದನ್ನು ತೆರೆಯ ಮೇಲೆ ಮೂಡಿಸಿರುವ ತೃಪ್ತಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮ್ ಅವರು ನೆಗೆಟಿವ್ ಪಾತ್ರ ಒಪ್ಪಿಕೊಂಡು, ಬೆಂಬಲಿಸಿದ್ದು ನಮಗೆ ಶಕ್ತಿ ನೀಡಿದೆ” ಎಂದರು.

ಸ್ಪಾರ್ಕ್

ಸ್ಪಾರ್ಕ್ ಚಿತ್ರದ ಈ ಮೊದಲ ಹಾಡು ಸೇರಿದಂತೆ 4 ಹಾಡುಗಳಿಗೆ ಸಂಗೀತ ನೀಡಿದವರು ಸಚಿನ್ ಬಸ್ರೂರು. ತುಂಬ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಈ ಹಾಡು ಬ್ರೇಕ್ ನೀಡಬಹುದೆನ್ನುವ ನಿರೀಕ್ಷೆ ಇವೆ. ಇಲ್ಲಿ ಒಟ್ಟು 4 ಹಾಡುಗಳಿವೆ. ಪ್ರೇಮ್ ಅವರಿಗೂ ಹಾಡು ಇವೆ ಎಂದರು. ಬಳಿಕ‌ ಮಾತನಾಡಿದ ಗೀತ ರಚನೆಕಾರ ಪ್ರಮೋದ್ ಮರವಂತೆ “ಈ‌ ಹಾಡಿನ ಹಿಂದಿ ಅವತರಣಿಕೆ ಕೂಡ‌ ಇಲ್ಲಿ ನೋಡಿದ್ದೀರಿ. ಹಿಂದಿಯಲ್ಲೂ ನಾನೇ ಹಾಡುಗಳನ್ನು ಬರೆದಿದ್ದೇನೆ.‌ ಕನ್ನಡದಲ್ಲಿ ಉತ್ತರ ಕರ್ನಾಟಕದ ಭಾಷೆ ಇದೆ.‌ ಅದು ನನ್ನ ಫೇವರಿಟ್ ಭಾಷಾ ಪ್ರಕಾರಗಳಲ್ಲಿ ಒಂದು ಎಂದರು.

ನಟ ಶರಣ್ ಜತೆ ಗಾಯಕಿ ಸಂಗೀತ ರವೀಂದ್ರನಾಥ್ ಸೇರಿ ಆಲಾಪಿಸಿರುವ ಈ ಗೀತೆಯನ್ನು ವೇದಿಕೆಯಲ್ಲಿ ಸಂಗೀತಾ ಜೊತೆಗೆ ಸಚಿನ್ ಬಸ್ರೂರು ಸೇರಿ ಆಲಾಪಿಸಿದರು.

ನಿರ್ಮಾಪಕ ದಂಪತಿ ಗರಿಮಾ ಮತ್ತು ಅವಿನಾಶ್ ವಸಿಷ್ಠ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ಮಾಲಿಕ ಮನೋಹರ್ ಅವರು ಸೇರಿ, ವೇದಿಕೆ ಮೇಲೆ ಈ ಹಾಡು ಬಿಡುಗಡೆಗೊಳಿಸಿದರು.

ಸ್ಪಾರ್ಕ್

ನಿರ್ಮಾಪಕ ಅವಿನಾಶ್ ವಸಿಷ್ಠ ಮಾತನಾಡಿ, “ಮೊದಲ ಕಾಪಿ ನೋಡಿದೆ. ಹೆಂಡತಿ ನಿರ್ಮಿಸಿದ್ದಾರೆ ಎಂದು ಹೇಳ್ತಿಲ್ಲ. ನಿಜಕ್ಕೂ ಚೆನ್ನಾಗಿ ಬಂದಿದೆ. ಈ ಹಾಡು ಎಲ್ಲ ಕಡೆ ಹಿಟ್ ಆಗುತ್ತೆ” ಎಂದರು.

ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿಯವರು ತಮಗೆ ಈ ಹಾಡು ಕೇಳಿದಾಗಲೇ ಒಂದೊಳ್ಳೆಯ ಸೆಟ್ ಹಾಕಲು ಸ್ಫೂರ್ತಿ ಸಿಕ್ಕಿತು ಎಂದರು. ಸಂಕಲನಕಾರ ಮಧು, ಛಾಯಾಗ್ರಾಹಕ ಸ್ವಾಮಿ ಜೆ ಗೌಡ ಹಾಡನ್ನು ಮೆಚ್ಚಿ ಮಾತನಾಡಿದರು.

“ಮೊದಲಾರ್ಧದಲ್ಲಿ ಧರ್ಮಣ್ಣ ಕಡೂರು ಅವರ ಪಾತ್ರದಿಂದ ಸಿಗುವ ಸ್ಪಾರ್ಕ್ ನನ್ನ ಪಾತ್ರದ ಮೂಲಕ ಸೆಕೆಂಡ್ ಹಾಫ್ ನಲ್ಲಿ ಮುಂದುವರಿಯುತ್ತೆ..” ಎಂದರು ನಟ ಮಹಾಂತೇಶ ಹಿರೇಮಠ. ಧರ್ಮಣ್ಣ ಕಡೂರು ಮಾತನಾಡುತ್ತಾ “ನಿಜವಾಗಿ ಜರ್ನಲಿಸಂ ಮಾಡಿರುವ ನಾನು ಚಿತ್ರದಲ್ಲಿ ಪತ್ರಕರ್ತನಾಗಿದ್ದೇನೆ” ಎಂದು ಹೇಳುತ್ತಾ ಹಾಡಿನ‌ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಮಾರಂಭದಲ್ಲಿ ಹಾಜರಿ ಇಲ್ಲದ ಬಾಬು ಅವರ ಕಾಸ್ಟ್ಯೂಮ್ ಮತ್ತು ಶರಣ್ ಸರ್ ಅವರ ಕಂಠವನ್ನು ಕೂಡ ನೆನಪಿಸಿಕೊಂಡರು. ಸಂಭಾಷಣೆಕಾರ ರಘು ನಿಡುವಳ್ಳಿ ಸೇರಿದಂತೆ ಪೂರ್ತಿ ಚಿತ್ರತಂಡದ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಸ್ಪಾರ್ಕ್ ಚಿತ್ರವು ಸಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

ಸ್ಪಾರ್ಕ್

Be the first to comment

Leave a Reply

Your email address will not be published. Required fields are marked *

Translate »
error: Content is protected !!