ಕರ್ಣಾಟಬಲಂ ಅಜೇಯಂ

‘ಕರ್ಣಾಟಬಲಂ ಅಜೇಯಂ’ ಹಾಡಿನ ಚಿತ್ರೀಕರಣ

ನಟ, ನಿರ್ಮಾಪಕ ಸಿ.ಪಿ ಯೋಗೇಶ್ವರ್ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಹಾಡಿನ ಚಿತ್ರೀಕರಣ ಬಾದಾಮಿಯಲ್ಲಿ ಅದ್ದೂರಿಯಾಗಿ  ನಡೆದಿದೆ.

ಬಾದಾಮಿಯ ಕೋಟೆಯಲ್ಲಿ ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ಕಲಾವಿದರೊಂದಿಗೆ ‘ಬಾದಾಮಿ ಸೀಮೆಯಿದು ಎಂತ ಸೊಬಗು …’ ಎಂಬ ಗೀತೆಗೆ   ಹೆಜ್ಜೆ ಹಾಕಿದರು. ಹಾಡಿನಲ್ಲಿ ಜನಪದ ಕಲೆಗಳಾದ ಯಕ್ಷಗಾನ, ನಂದಿ ಕೋಲು ಕುಣಿತ ಸೇರಿದಂತೆ ಹಲವು ನೃತ್ಯತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ತ್ರಿಲೋಕ್ ತ್ರಿವಿಕ್ರಮ್ ಅವರ ಸಾಹಿತ್ಯದ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ. ಯೋಗೇಶ್ವರ್, ‘”ಕರ್ಣಾಟಬಲಂ ಅಜೇಯಂ” ಸಿನಿಮಾ ಚಿತ್ರೀಕರಣ ಪ್ರಾರಂಭಿಸಿ ತಿಂಗಳಾಗುತ್ತಾ ಬಂದಿದೆ. ನರಗುಂದ, ಬಾದಾಮಿಯ ಸುತ್ತಮುತ್ತ ನಿರಂತರ ಚಿತ್ರೀಕರಣ ಮಾಡುತ್ತಿದ್ದೇವೆ. ಆನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರಡು ದಿನ ಚಿತ್ರೀಕರಣ ಮಾಡಿದರೆ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತದೆ. ನಂತರ ಎರಡನೇ ಹಂತದಲ್ಲಿ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಬಾದಾಮಿಯಿಂದ ಶುರುವಾಗುವ ಕಥೆ ಇಡೀ ಕರ್ನಾಟಕಕ್ಕೆ ಸಾಗುತ್ತದೆ. ಇದೊಂದು ಅಪ್ಪಟ ಕನ್ನಡತನದ, ನಮ್ಮ ಮಣ್ಣಿನ ಸಿನಿಮಾ.‌ ಈ ಮೂಲಕ ಇಂದಿನ ಯುವಕರಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.’ ಎಂದರು.

ಕರ್ಣಾಟಬಲಂ ಅಜೇಯಂ

‘ ಇಂದಿನ ರೈತರ ಸಮಸ್ಯೆಗಳ ಜೊತೆಗೆ ಚಾಲುಕ್ಯರ ಕಾಲದ ಕಥೆಯನ್ನು ಇದರಲ್ಲಿ ಹೇಳಲಿದ್ದೇವೆ.  ಈ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮಾಡುತ್ತಿದ್ದೇವೆ.  ಪುಲಕೇಶಿಯ ನಾಡಿನ ಜನ ಇಂದು ಏಕೆ ಗುಳೆ ಹೋಗುತ್ತಿದ್ದಾರೆ ಎಂಬ ಅಂಶದ ಮೇಲೆ ಕಥೆ ಸಾಗಲಿದ್ದು, ಸಂಪೂರ್ಣ ಕರ್ನಾಟಕ ನೀರಾವರಿ ಆಗಬೇಕು ಎಂಬುದು ನಮ್ಮ ಆಶಯ. “ಕರ್ಣಾಟಬಲಂ” ಚಾಲುಕ್ಯರ ಪುಲಕೇಶಿ ಸೈನ್ಯದ ಹೆಸರು. ಅದನ್ನೇ ನಾವು ಚಿತ್ರದ ಶೀರ್ಷಿಕೆಯಾಗಿ ಇಟ್ಟುಕೊಂಡಿದ್ದೇವೆ. ನಾನು 25 ವರ್ಷದ ನಂತರ ಅಭಿನಯ ಮಾಡುತ್ತಿದ್ದು, ರೈತ ಹೋರಾಟಗಾರನ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದ ಶೇಕಡಾ 35% ಭಾಗದ ಚಿತ್ರೀಕರಣ ಮುಗಿದಿದೆ. ಮುಂಬರುವ ಸಂಕ್ರಾಂತಿ ವೇಳೆಗೆ ಚಿತ್ರ ತೆರೆಗೆ ಬರಲಿದೆ’ ಎಂದು ಮಾಹಿತಿ ನೀಡಿದರು.

ಚಿತ್ರದ ನಿರ್ದೇಶಕ ನಾಗಣ್ಣ ಮಾತನಾಡಿ, ‘ ಕಥೆ ಇಂದಿನ ಯುವಪೀಳಿಗೆ ಮತ್ತು ಆರನೇ ಶತಮಾನದ ಕಾಲಘಟ್ಟದಲ್ಲಿ ಸಾಗುತ್ತದೆ. ಐತಿಹಾಸಿಕ ಹಾಗೂ ಸಾಮಾಜಿಕ ಕಥೆ ಒಳಗೊಂಡ ಸಿನಿಮಾ ಇದಾಗಿದೆ’ ಎಂದು ಹೇಳಿದರು.
ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, ‘ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಜನ ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿ ಆಗಿದೆ.   ಒಬ್ಬ ನಟನಾಗಿ ನಿಲ್ಲಬೇಕು ಎಂಬ ಆಸೆ ಇದೆ‌. ಕರ್ಣಾಟಬಲಂ ಚಿತ್ರ ಜನವರಿ 15 ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ’ ಎಂದರು.

ಕರ್ಣಾಟಬಲಂ ಅಜೇಯಂ

 

Be the first to comment

Leave a Reply

Your email address will not be published. Required fields are marked *

Translate »
error: Content is protected !!