ಕಾವೇರಿ ನದಿ ನೀರಿನ ವಿವಾದ ತಮಿಳಿನ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ತಟ್ಟಿದ್ದು, ರಾಜ್ಯದ ಹಲವು ಥಿಯೇಟರ್‌ಗಳಿಂದ ಸಿನಿಮಾ ಎತ್ತಂಗಡಿಯಾಗುತ್ತಿದೆ.
ಕನ್ನಡ ಪರ ಸಂಘಟನೆಗಳು ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮಿಳು ಸಿನಿಮಾ ಪ್ರದರ್ಶನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನವನ್ನು ರದ್ದುಗೊಳಿಸುತ್ತಿದ್ದಾರೆ. ನಿನ್ನೆವರೆಗೂ ಬೆಂಗಳೂರಿನ ಅಂಜನ್ ಥಿಯೇಟರ್‌ನಲ್ಲಿ ‘ಜನನಾಯಗನ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಎಚ್ಚರಿಕೆಯ ಬೆನ್ನಲ್ಲೇ ಥಿಯೇಟರ್‌ನಲ್ಲಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಇಂದು ಚಿತ್ರದ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಅಂಜನ್ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಇಂದು ‘ಜನನಾಯಗನ್’ ಬದಲಿಗೆ ಇಂಗ್ಲಿಷ್ ಹಾಗೂ ತೆಲುಗು ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಬೆಂಗಳೂರು ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಜನ ನಾಯಗನ್’ ಚಿತ್ರದ 500ಕ್ಕೂ ಹೆಚ್ಚು ಶೋಗಳು ನಿನ್ನೆ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಕಾವೇರಿ ಪ್ರತಿಭಟನೆಯ ತೀವ್ರತೆಯಿಂದಾಗಿ ಇಂದು ಶೋಗಳ ಸಂಖ್ಯೆ 100ಕ್ಕೆ ಇಳಿದಿದೆ. ಎಲ್ಲಾ ಚಿತ್ರಮಂದಿರಗಳಿಂದಲೂ ಸದ್ದಿಲ್ಲದೆ ತಮಿಳು ಸಿನಿಮಾದ ಶೋಗಳನ್ನು ತೆಗೆದು ಹಾಕಲಾಗುತ್ತಿದೆ.
ಕಾವೇರಿ ಕಿಚ್ಚು ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳ ಮೇಲೆ ದಾಳಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಮಾಲೀಕರು ಸ್ವಯಂಪ್ರೇರಿತರಾಗಿ ತಮಿಳು ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿದ್ದಾರೆ.
ಕಾವೇರಿ ಕೊಳ್ಳದ ಭಾಗದಲ್ಲೂ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ. ಕನ್ನಡಪರ ಸಂಘಟನೆಗಳು ಹಾಗೂ ರೈತ ಮುಖಂಡರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.
—-





Be the first to comment