ನಟ ಧನಂಜಯ್ ಹಾಗೂ ನಿರ್ದೇಶಕ ಶಂಕರ್ ಗುರು ಅವರ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಡಿಸೆಂಬರ್ 24ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಧನಂಜಯ್ ಜೊತೆಗೆ ನಾಯಕಿಯಾಗಿ ರೇಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಲೂಸ್ ಮಾದ ಯೋಗಿ, ರಂಗಾಯಣ ರಘು, ಉಮಾಶ್ರೀ, ಸಾಧು ಕೋಕಿಲ, ನಾಗಭೂಷಣ್ ಮತ್ತು ಪೂರ್ಣಚಂದ್ರ ಮೈಸೂರು ಇದ್ದಾರೆ. ವಾಸುಕಿ ವೈಭವ್ ಸಂಗೀತದ ಈ ಚಿತ್ರವನ್ನು ರಾಯಲ ಸ್ಟುಡಿಯೋಸ್ ಹಾಗು ಐರಾ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ‘ಮದರ್ ಪ್ರಾಮಿಸ್’ ಯಶಸ್ಸಿನ ಬೆನ್ನಲೇ ತಮ್ಮ ಮುಂದಿನ ಸಿನಿಮಾ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಆರಂಭದಲ್ಲಿ ಈ ಸಿನಿಮಾವನ್ನು ಕೇವಲ ಆಕ್ಷನ್ ಸಿನಿಮಾ ಎಂದು ಯೋಜಿಸಲಾಗಿದ್ದರೂ, ನಂತರ ಇದನ್ನು ಕಾಮಿಡಿ ಮತ್ತು ಎಮೋಷನ್ ಒಳಗೊಂಡ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿ ಮರುರೂಪಿಸಲಾಗಿದೆ.
‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದೊಂದಿಗೆ ಧನಂಜಯ್ ಮತ್ತು ಡಾ. ಶಿವರಾಜ್ಕುಮಾರ್ ನಟನೆ, ಹೇಮಂತ್ ಎಂ ರಾವ್ ನಿರ್ದೇಶನದ ಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ‘ಅಣ್ಣ ಫ್ರಮ್ ಮೆಕ್ಸಿಕೋ’ ಮುಂಚೆ ಬಿಡುಗಡೆಯಾಗುತ್ತದೆಯೇ ಅಥವಾ 2027 ಕ್ಕೆ ಮುಂದೂಡಲ್ಪಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
—–





Be the first to comment