ಬಾಲಿವುಡ್ನ ‘ಬ್ಯಾಡ್ ಬಾಯ್’ ಸಲ್ಮಾನ್ ಖಾನ್ ಮಾಡಿದ್ದಾರೆ ಎನ್ನಲಾಗುತ್ತಿರುವ ಕೃಷ್ಣಮೃಗ ಭೇಟೆ ಪ್ರಕರಣದ ಕುರಿತಾದ ಕತೆಯನ್ನು ಒಳಗೊಂಡಿರುವ ‘ಕಾಲಾ ಹಿರನ್’ ಸಿನಿಮಾ ಪ್ರಪಂಚದಾದ್ಯಂತ 8 ಸಾವಿರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದ ಬಿಡುಗಡೆಯನ್ನು ತಡೆಯಲು ಸಲ್ಮಾನ್ ಖಾನ್ ಹಾಗೂ ಅವರ ಕಾನೂನು ತಂಡ ಅವಿರತ ಪ್ರಯತ್ನ ಮಾಡುತ್ತಿದೆ. ಆದರೆ ‘ಕಾಲಾ ಹಿರನ್’ ಸಿನಿಮಾದ ನಿರ್ಮಾಪಕರು ಪಟ್ಟು ಸಡಿಸಲು ನಿರಾಕರಿಸಿ ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರಲಿದ್ದೇನೆ ಎಂದಿದ್ದಾರೆ.
‘ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ತಡೆ ಆಜ್ಞೆ, ನಿಷೇಧದ ಆಜ್ಞೆ ಸಲ್ಮಾನ್ ಖಾನ್ಗೆ ದೊರಕಿಲ್ಲ. ಪ್ರಕರಣದ ವಿಚಾರಣೆಯನ್ನು ಜುಲೈ 6ಕ್ಕೆ ದೆಹಲಿ ಹೈಕೋರ್ಟ್ ಮುಂದೂಡಿದೆ. ನ್ಯಾಯಾಲಯದ ಎದುರು ಯಾವುದೇ ಸ್ಟಾರ್ ಅಥವಾ ಸೆಲೆಬ್ರಿಟಿ ಎಂಬುದು ನಡೆಯಲ್ಲ. ನ್ಯಾಯಾಲಯ ಯಾವುದೇ ಗ್ಲಾಮರ್ ಒಪ್ಪಿಕೊಳ್ಳುವುದಿಲ್ಲ, ‘ಕಾಲಾ ಹಿರನ್’ ಸಿನಿಮಾ ನಿಲ್ಲುವುದಿಲ್ಲ. ನಮ್ಮ ಸಿನಿಮಾ ಇಡೀ ಪ್ರಪಂಚದಾದ್ಯಂತ 8000 ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದಿದ್ದಾರೆ ಸಿನಿಮಾದ ನಿರ್ಮಾಪಕ ಅಮಿತ್ ಜೈನ್.
1998 ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗವನ್ನು ಭೇಟೆ ಆಡಿದ್ದಾರೆ ಎಂಬ ಆರೋಪ ಇದೆ. ಪ್ರಕರಣದಲ್ಲಿ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರ, ಟಬು ಇನ್ನೂ ಕೆಲವರು ಆರೋಪಿಗಳಾಗಿದ್ದರು. ಆದರೆ ಸಲ್ಮಾನ್ ಖಾನ್ ಹೊರತಾಗಿ ಇತರರ ಮೇಲೆ ಆರೋಪಗಳನ್ನು ಕೈಬಿಡಲಾಗಿದೆ.
ಜೋದ್ಪುರ ನ್ಯಾಯಾಲಯ ಸಲ್ಮಾನ್ ಖಾನ್ ನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ಖಾನ್ ಅವರನ್ನು ಪ್ರಕರಣದಿಂದ ಖುಲಾಸೆ ಗೊಳಿಸಿತ್ತು. ಈಗಲೂ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.
—-





Be the first to comment