ಚಿತ್ರ: ಲವ್ ಸೀಸನ್ಸ್
ನಿರ್ದೇಶನ: ಕೃತ್ವಿಕ್ ಶೆಟ್ಟಿ
ನಿರ್ಮಾಣ: ಮಂಜುನಾಥ ನೀಲೇರಿ
ತಾರಾಗಣ: ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ, ರಾಜೇಶ್ ನಟರಂಗ, ಮಂಡ್ಯ ರಮೇಶ್ ಮುಂತಾದವರು….
ರೇಟಿಂಗ್: 3.5/5
ಈ ಜಗತ್ತಿನಲ್ಲಿ ಪ್ರೇಮಿಸದ ವ್ಯಕ್ತಿಗಳು ಅಪರೂಪ. ಹಲವರು ಹೇಳಿಕೊಂಡು ತಿರುಗಾಡಿದರೆ ಇನ್ನು ಕೆಲವರು ತಮ್ಮ ಪ್ರೇಮವನ್ನು ಗುಟ್ಟಾಗಿಯೇ ಉಳಿಸಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಪ್ರೇಮದ ಹೆಸರಲ್ಲಿ ವಂಚಿಸುವವರದೂ ಒಂದು ವರ್ಗವಿದೆ. ಈ ಮೂರು ವರ್ಗಗಳ ಮಧ್ಯೆ ಸಿಲುಕುವ ಪ್ರೇಮಿಯ ಕಥೆಯೇ ಈ ಸಿನಿಮಾ.
ರಾಮ್ ಎನ್ನುವ ತನ್ನ ಹೆಸರಿಗೆ ತಕ್ಕಂತೆ ಒಂದೇ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಆ ಹುಡುಗಿ ರಾಮನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾಳ? ಕಾಲ ಬದಲಾದ ಹಾಗೆ ರಾಮನೂ ಬದಲಾಗುತ್ತಾನ? ಇಂಥ ಕುತೂಹಲಕಾರಿ ಸಂದರ್ಭಗಳನ್ನು ಸೃಷ್ಟಿಸಿ ಮೈಮರೆಯವಂತೆ ಮಾಡುವ ಚಿತ್ರವೇ ಲವ್ ಸೀಸನ್ಸ್.
ಚಿತ್ರವನ್ನು ಫ್ಲ್ಯಾಶ್ ಬ್ಯಾಕ್ ಮೂಲಕ ಕಟ್ಟಿಕೊಟ್ಟಿರುವ ರೀತಿ ಕಥೆಗೆ ಹೊಸ ಕಳೆ ತಂದುಕೊಟ್ಟಿದೆ. ಪೀಟರ್ ಮತ್ತು ಮರಿಯಾ ಎನ್ನುವ ಕ್ರಿಶ್ಚಿಯನ್ ದಂಪತಿಯನ್ನು ಅಪ್ಪ, ಅಮ್ಮ ಎಂದು ಕರೆಯುವ ಪುತ್ರ ರಾಮ್! ಇದು ಹೇಗೆ ಸಾಧ್ಯ ಎನ್ನುವುದಕ್ಕೆ ಚಿತ್ರದಲ್ಲಿ ಸ್ಪಷ್ಟ ಉತ್ತರವಿದೆ. ಅದು ಬರೀ ಉತ್ತರವಷ್ಟೇ ಆಗಿರುವುದಿಲ್ಲ. ಕಥೆಯ ಜೀವಾಳವೂ ಆಗಿರುತ್ತದೆ. ಮಧ್ಯಂತರದ ಬಳಿಕ ಮತ್ತೊಂದು ಟ್ವಿಸ್ಟ್ ಕೂಡ ಎದುರಾಗಿ ಚಿತ್ರ ಪ್ರೇಕ್ಷಕ ಪೂರ್ತಿ ಕಥೆಯೊಳಗೆ ಮುಳುಗುವಂತೆ ಮಾಡುತ್ತದೆ. ಸದ್ಯದ ದಿನಗಳಲ್ಲಿ ಇಷ್ಟೊಂದು ವೈವಿಧ್ಯತೆ ತುಂಬಿರುವ ಚಿತ್ರಕಥೆ ಕನ್ನಡದಲ್ಲಿ ಬಂದೇ ಇಲ್ಲ ಎಂದು ಧೈರ್ಯದಿಂದ ಹೇಳಬಹುದು.
ರಾಮ್ ಪಾತ್ರ ಮಾಡಿರುವ ಮುಕುಂದ ರಾಮಸ್ವಾಮಿ ತಮ್ಮ ಪಾತ್ರಕ್ಕೆ ಜೀವ ನೀಡಿ ಅಭಿನಯಿಸಿದ್ದಾರೆ. ವಿವಿಧ ಕಾಲಘಟ್ಟಗಳನ್ನು ತಮ್ಮ ವೇಷಭೂಷಣಗಳಿಂದ ಮಾತ್ರವಲ್ಲ, ಹಾವಭಾವಗಳಿಂದಲೂ ಭಿನ್ನವಾಗಿಸಿದ್ದಾರೆ. ರಾಮ್ ಸ್ನೇಹಿತರನ್ನು ಕೂಡ ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ತೋರಿಸಿರುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ.
ಪೀಟರ್ ಮತ್ತು ಮರಿಯಾ ಪಾತ್ರವನ್ನು ರಾಜೇಶ್ ನಟರಂಗ ಮತ್ತು ಸಂಗೀತಾ ಅನಿಲ್ ನಿರ್ವಹಿಸಿದ್ದಾರೆ. ಪೀಟರ್ ಬದುಕಿನ ಎರಡು ಆಯಾಮಗಳಿಗೆ ರಾಜೇಶ್ ಬೆಳಕು ಚೆಲ್ಲಿದ್ದಾರೆ. ಮಂಡ್ಯ ರಮೇಶ್ ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಡುಗಳು ಕೂಡ ಆಕರ್ಷಕವಾಗಿದೆ.
ಚಿತ್ರದಲ್ಲಿ ದಿಯಾ ಕೀರ್ತಿ , ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಮುಖ್ಯ ಲೇಡಿಕ್ಯಾರೆಕ್ಟರ್ ಗಳನ್ನು ನಿಭಾಯಿಸಿದ್ದಾರೆ. ಈ ಪಾತ್ರಗಳೇ ಚಿತ್ರದ ತಿರುವಿಗೆ ಪ್ರಮುಖ ಕಾರಣ ಎನ್ನಬಹುದು. ಲವ್ ಸ್ಟೋರಿಯಲ್ಲೇ ಸಾಮಾಜಿಕ ಸಂದೇಶ ನೀಡುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ ಚಿತ್ರವಾಗಿ ಸಿನಿಮಾ ಮೂಡಿಬಂದಿದೆ.





Be the first to comment