‘ಟಾಕ್ಸಿಕ್’ ಆಗಸ್ಟ್ 26ರಂದು ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ   ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.  ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾ ಬಂಧನ ಹಬ್ಬಗಳ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಆಗಸ್ಟ್ 26ರ ಬುಧವಾರದಂದು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಚಿತ್ರ  ಗೋವಾದಲ್ಲಿ 1940 ರಿಂದ 1970ರವರೆಗೆ ನಡೆಯುವ  ಡ್ರಗ್ ಕಾರ್ಟೆಲ್‌ನ ಉದಯದ ಕುರಿತ ಕಥೆಯನ್ನು ಒಳಗೊಂಡಿದೆ.

ಟಾಕ್ಸಿಕ್ ಚಿತ್ರತಂಡ  ಈ ಹಿಂದೆ ಮೂರು ಬಿಡುಗಡೆ ದಿನಾಂಕಗಳನ್ನು ಮುಂದೂಡಿದೆ. ಮೊದಲು ಏಪ್ರಿಲ್ 10ಕ್ಕೆ ಚಿತ್ರ ಬಿಡುಗಡೆ ನಿಗದಿಯಾಗಿತ್ತು. ಆದರೆ ಚಿತ್ರೀಕರಣ ಮತ್ತು ನಿರ್ಮಾಣದ ವಿಳಂಬದಿಂದ ಆ ದಿನಾಂಕವನ್ನು ಮುಂದೂಡಲಾಯಿತು. ನಂತರ ಚಿತ್ರವನ್ನು ಮಾರ್ಚ್ 19ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತು.  ಬಾಲಿವುಡ್ ಚಿತ್ರ ಧುರಂಧರ್ 2 ಬಿಡುಗಡೆ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಆ ದಿನಾಂಕವನ್ನು ಕೈಬಿಡಲಾಯಿತು.

ನಂತರ ಚಿತ್ರವನ್ನು ಜೂನ್ 4ರಂದು ಬಿಡುಗಡೆ ಮಾಡುವುದಾಗಿ ತಿಳಿಸಲಾಯಿತು. ಏಪ್ರಿಲ್ 2026ರ ಕೊನೆಯಲ್ಲಿ ನಿರ್ಮಾಪಕರು ಸಿನಿಮಾಕಾನ್‌ನಲ್ಲಿ ಅಂತರರಾಷ್ಟ್ರೀಯ ಖರೀದಿದಾರರು ಮತ್ತು ವಿತರಕರಿಗೆ ಚಿತ್ರವನ್ನು ಪ್ರದರ್ಶಿಸಿದ ನಂತರ ಮತ್ತೊಮ್ಮೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು.

‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಮೋಹನ್‌ದಾಸ್ ಅವರೊಂದಿಗೆ  ಚಿತ್ರಕಥೆಯನ್ನು ಬರೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!