ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನಗಾಥೆಯನ್ನು ಆಧರಿಸಿದ ವಿಶೇಷ ಡಾಕ್ಯುಮೆಂಟರಿಯನ್ನು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ನಿರ್ಮಿಸುತ್ತಿದೆ.
ಖ್ಯಾತ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಡಾಕ್ಯುಮೆಂಟರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವರೆಗೆ ದ್ರೌಪದಿ ಮುರ್ಮು ಅವರು ನಡೆದು ಬಂದ ಹೋರಾಟದ ಹಾದಿಯನ್ನು ಈ ಡಾಕ್ಯುಮೆಂಟರಿಯಲ್ಲಿ ಅನಾವರಣಗೊಳಿಸಲಿದೆ.
ಡಾಕ್ಯುಮೆಂಟರಿಯ ಪ್ರಮುಖ ಭಾಗಗಳ ಚಿತ್ರೀಕರಣ ಈಗಾಗಲೇ ಒಡಿಶಾದಲ್ಲಿರುವ ದ್ರೌಪದಿ ಮುರ್ಮು ಅವರ ಹುಟ್ಟೂರಿನಲ್ಲಿ ನಡೆದಿದೆ. ಅವರ ಬಾಲ್ಯ ಮತ್ತು ಹಳ್ಳಿಯ ಬದುಕನ್ನು ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ವಿಶೇಷ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ದ್ರೌಪದಿ ಮುರ್ಮು ಅವರ ವೈಯಕ್ತಿಕ ಬದುಕಿನಲ್ಲಿ ಎದುರಾದ ನೋವು, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂದರ್ಭಗಳು, ಸಾರ್ವಜನಿಕ ಜೀವನದಲ್ಲಿ ಸಾಧಿಸಿದ ಯಶಸ್ಸು ಡಾಕ್ಯುಮೆಂಟರಿಯ ಪ್ರಮುಖ ಆಕರ್ಷಣೆಯಾಗಲಿವೆ.
ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ ಮುರ್ಮು ಅವರ ಪಯಣ, ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಸಂಕಷ್ಟಗಳನ್ನು ಚಿತ್ರ ದಾಖಲಿಸಲಿದೆ.
ಈ ಹಿಂದೆ ಆಮಿರ್ ಖಾನ್ ಮತ್ತು ಸ್ವಾತಿ ಚಕ್ರವರ್ತಿ ಜೋಡಿ ‘ರುಬಾರು ರೋಶ್ನಿ’ ಸಾಕ್ಷ್ಯಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
—–





Be the first to comment