ಚಿತ್ರ: ದೊಡ್ಮನ್ಸ
ನಿರ್ದೇಶನ: ಆರ್.ಶರತ್ ಕೃಷ್ಣ
ನಿರ್ಮಾಪಕರು: ವೇದಿಕ್ ವೀರ ಮತ್ತು ಕವಿತಾ ಮಂಜುನಾಥ್
ತಾರಾಗಣ: ಆರ್. ಶರತ್ ಕೃಷ್ಣ, ರೇಶ್ಮಾ ಲಿಂಗರಾಜಪ್ಪ, ಬಲರಾಜ್ವಾಡಿ, ಶಿಲ್ಪಾ ಶಿವಕುಮಾರ್ ಮೊದಲಾದವರು…
ರೇಟಿಂಗ್ : 3.5/5
ಆಟೋರಿಕ್ಷಾ ಚಾಲಕ ಹೇಗೆ ದೊಡ್ಡ ಮಟ್ಟದಲ್ಲಿ ಬದುಕು ಕಟ್ಟಿಕೊಳ್ಳಬಲ್ಲ, ದೊಡ್ಡ ಮನುಷ್ಯನಾಗಬಲ್ಲ ಎನ್ನುವುದನ್ನು ಮನಮುಟ್ಟುವಂತೆ ತೋರಿಸಿರುವ ಚಿತ್ರ ಇದು. ಇಲ್ಲಿ ಆಟೋ ಚಾಲಕ ಶಿವು ಹೇಗೆ ಸಿನಿಮಾ ನಟನಾಗಲು ಬಯಸುತ್ತಾನೆ ಮತ್ತು ಅದೇ ಸಂದರ್ಭದಲ್ಲಿ ಬದುಕೇ ಹೇಗೆ ಸಿನಿಮಾದಂತೆ ಬದಲಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ.
ಆಟೋರಿಕ್ಷಾ ಡ್ರೈವರ್ ಶಿವುಗೆ ಬಾಲ್ಯದಿಂದಲೇ ಸಿನಿಮಾ ನಟನಾಗಬೇಕು ಎನ್ನುವ ಕನಸು. ಆದರೆ ಆ ಕನಸು ನನಸಾಗುವ ಮೊದಲೇ ಕನಸುಗಾತಿಯೊಬ್ಬಳ ಪರಿಚಯವಾಗುತ್ತದೆ. ಆಕೆಯ ಹೆಸರು ಸ್ನೇಹ. ಶಿವುನ ಆಟೋ ಹತ್ತಿ ಅಳತೊಡಗಿದ ಆಕೆ ಹೇಳಿದಂಥ ಕತೆಯೇ ಈ ಚಿತ್ರಕ್ಕೆ ಪ್ರಮುಖ ತಿರುವು ನೀಡುತ್ತದೆ. ಸ್ನೇಹ ಬಡವರ ಮನೆಯ ಹುಡುಗಿ. ನಟಿಯಾಗಲೆಂದು ಹೋದವಳಿಗೆ ಆಡಿಶನ್ ಸಂದರ್ಭದಲ್ಲೇ ಕಮಿಟ್ಮೆಂಟ್ ಗೆ ಕರೆಯುವ ಅನುಭವ ಎದುರಾಗುತ್ತದೆ. ಈ ವಿಷಯ ತಿಳಿದ ಬಳಿಕ ಸ್ನೇಹಳ ಕನಸಿಗೆ ಶಿವು ಕೈ ಜೋಡಿಸುತ್ತಾನೆ. ತನ್ನ ಕನಸಿನ ಚಿತ್ರದಲ್ಲಿ ನಾಯಕಿಯಾಗಿಸಲು ಪ್ರಯತ್ನ ನಡೆಸುತ್ತಾನೆ. ಆದರೆ ಈ ಪ್ರಯತ್ನ ಫಲಿಸುತ್ತದೆಯೇ? ಶಿವುಗೆ ಎದುರಾಗುವ ಸಮಸ್ಯೆಗಳೇನು? ಅದಕ್ಕೆ ಕಂಡು ಹಿಡಿಯುವ ಪರಿಹಾರಗಳೇನು ಎನ್ನುವುದನ್ನು ಥಿಯೇಟರ್ ನಲ್ಲಿ ನೋಡುವುದೇ ಸೊಗಸು.
ರಿಕ್ಷಾ ಚಾಲಕ ಶಿವು ಪಾತ್ರವನ್ನು ಸ್ವತಃ ನಿರ್ದೇಶಕ ಆರ್ ಶರತ್ ಕೃಷ್ಣ ಅವರೇ ನಿರ್ವಹಿಸಿದ್ದಾರೆ. ಮೊದಲ ಚಿತ್ರದಲ್ಲೇ ಭರವಸೆಯ ಅಭಿನಯ ನೀಡಿದ್ದಾರೆ. ಶಿವುಗೆ ಒಬ್ಬ ಆತ್ಮೀಯ ಸ್ನೇಹಿತನಾಗಿರುವ ಪಾತ್ರವನ್ನು ಕಾಮಿಡಿ ಕಿಲಾಡಿಗಳು ಕಾರ್ತಿಕ್ ಮಾಡಿದ್ದಾರೆ. ಶಿವು ಸ್ನೇಹಿತೆಯಾಗಿ, ಬಳಿಕ ಪ್ರೇಯಸಿಯಾಗುವ ಸ್ನೇಹ ಪಾತ್ರದಲ್ಲಿ ರೇಶ್ಮಾ ಲಿಂಗರಾಜಪ್ಪ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಒಳಗಿನ ಸಿನಿಮಾ ನಿರ್ಮಾಪಕರಾಗಿ ಬಲ ರಾಜ್ ವಾಡಿ ಎಂದಿನ ಸಹಜ ಶೈಲಿಯಲ್ಲಿ ಗಮನ ಸೆಳೆಯುತ್ತಾರೆ.
ಚಿತ್ರದ ಪ್ರಮುಖ ಆಕರ್ಷಣೆ ಸಾಹಸ ಸಂಯೋಜನ ಎಂದೇ ಹೇಳಬಹುದು. ಫೈಟ್ ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಹಾಡುಗಳನ್ನು ಕೂಡ ಚೆನ್ನಾಗಿ ಶೂಟ್ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಪ್ರೇಮಜೋಡಿಗಳನ್ನು ಅದ್ಭುತವಾಗಿ ತೋರಿಸಲಾಗಿದೆ.
ಯಾವ ಸ್ಟಾರ್ ಹೀರೋಗಳ ಚಿತ್ರಕ್ಕೂ ಕಡಿಮೆ ಇರದಂತೆ ಸಿನಿಮಾ ಮೇಕಿಂಗ್ ಮೂಡಿಬಂದಿರುವುದು ಪ್ರಶಂಸಾರ್ಹ ವಿಚಾರ. ಸಿನಿಮಾ ಆಸಕ್ತರಿಗೆ ಚಿತ್ರೋದ್ಯಮ ಹೇಗಿರುತ್ತದೆ ಎನ್ನುವುದನ್ನು ಪರದೆಯ ಮೇಲೆ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ರಿಕ್ಷಾಚಾಲಕನ ಯಶಸ್ಸನ್ನು ತೋರಿಸುವ ಈ ಚಿತ್ರವನ್ನು ಸಾಮಾನ್ಯ ಪ್ರೇಕ್ಷಕರು ತಮ್ಮದೇ ಕಥೆ ಎಂದು ಎರಡೂ ಕೈಚಾಚಿ ಸ್ವೀಕರಿಸುವುದರಲ್ಲಿ ಸಂದೇಹವಿಲ್ಲ.





Be the first to comment