ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಗೀತಾ ಒಡೆಯರ್ ಬಳಲುತ್ತಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಗೀತಾ ಒಡೆಯರ್ ಮಲ್ಟಿಪಲ್ ಮೈಲೋಮಾ ಎಂಬ ರಕ್ತದ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ತಾಯಿ ನಿಧನಕ್ಕೆ ಪವನ್ ಒಡೆಯರ್ ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದು, ‘ಮಾತು ಹರಿತವಾದರೂ ಕಾಳಜಿ ಬೆಟ್ಟದಷ್ಟು…. ಹೋಗಿ ಬಾ ಗೀತಮ್ಮ…’ ಎಂದು ಪೋಸ್ಟ್ ಮಾಡಿದ್ದಾರೆ.
‘ಅಮ್ಮ ಹೋಗಿ ಬಾ.. ಕಣ್ಣು ಹೇಡಿ, ಕೈ ರಥ ಅಂತ ಹೇಳುತ್ತಾ ಎಷ್ಟೊಂದು ಕೆಲಸ ಎಂದು ನೋಡೋ ಬದ್ಲು, ಕೆಲಸ ಮಾಡಿ ಮುಗಿಸು ಅಂದ ಗುರು ನೀನು. ಬಡತನದಲ್ಲೂ ಬದುಕು ಕಲಿಸಿಕೊಟ್ಟ ದೇವರು ನೀನು. ನಾನು ಚಿತ್ರರಂಗಕ್ಕೆ ಹೋಗ್ತೀನಿ ಅಂದಾಗ ಬೆನ್ನು ತಟ್ಟಿದ ಸ್ನೇಹಿತೆ. ನನ್ನ ಮೊದಲ ಕಿರು ಚಿತ್ರಕ್ಕೆ ಬಂಡವಾಳ ಹೂಡಿದ ಕರುಣಾಮಯಿ. ಮಾತು ಹರಿತವಾದರೂ ಕಾಳಜಿ ಬೆಟ್ಟದಷ್ಟು…. ಹೋಗಿ ಬಾ ಗೀತಮ್ಮ…’ ಎಂದು ಬರೆದುಕೊಂಡಿದ್ದಾರೆ.
ಪವನ್ ಪತ್ನಿ ಅಪೇಕ್ಷಾ ಅವರು ‘ನನ್ನ ಪ್ರೀತಿಯ ಅತ್ತೆ ಗೀತಾ ಒಡೆಯರ್ ಅವರು ನಿಧನರಾಗಿದ್ದಾರೆ. ಅವರು ತಮ್ಮ ಗಟ್ಟಿತನ, ಪ್ರೀತಿಯಿಂದ ಅನೇಕರಿಗೆ ಹತ್ತಿರವಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಬಿಟ್ಟುಹೋದ ಅಮೂಲ್ಯ ನೆನಪುಗಳು ನಮ್ಮೊಂದಿಗಿವೆ. ಅಗಲಿದ ಆತ್ಮಕ್ಕೆ ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದಗಳನ್ನು ನಾವು ಕೋರುತ್ತೇವೆ. ಅವರ ಅಂತ್ಯಕ್ರಿಯೆ ಕುಣಿಗಲ್‌ನಲ್ಲಿ ನಡೆಯಲಿದೆ’ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಗೀತಾ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪವನ್ ಒಡೆಯರ್ ಅವರು ಬೆಂಗಳೂರಿನಲ್ಲಿಯೇ ತಾಯಿಯನ್ನು ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ವೈದ್ಯಕೀಯ ಪ್ರಯತ್ನಗಳು ಫಲಿಸದೇ ಗೀತಾ ಒಡೆಯರ್ ನಿಧನರಾಗಿದ್ದಾರೆ.
—





Be the first to comment