ಸಿಎಂ ವಿಜಯ್ ಮೂಕಾಂಬಿಕೆಗೆ ಬೆಳ್ಳಿ ಕಡಗ ಅರ್ಪಣೆ

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು  ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ 1.6 ಕೆಜಿ  ತೂಕದ ಬೆಳ್ಳಿ ಕಡಗವನ್ನು ಕಾಣಿಕೆಯಾಗಿ ಅರ್ಪಿಸಿದರು.

ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿದರು. ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಸಂಕಲ್ಪ ಪೂಜೆ ನೆರವೇರಿಸಿದ ಅವರು ಸುಮಾರು 20 ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕಾಲ ಕಳೆದರು.

ವಿಜಯ್ ಅವರು ದೇವಿಗೆ 1.6 ಕೆಜಿ ತೂಕದ ಬೆಳ್ಳಿ ಕಡಗವನ್ನು ಸಮರ್ಪಿಸಿರುವುದಾಗಿ ಕೊಲ್ಲೂರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮಾಹಿತಿ ನೀಡಿದ್ದಾರೆ. ವಿಜಯ್ ಅವರು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಚುನಾವಣೆಗೆ ಮುನ್ನ ವಿಜಯ್ ಅವರ ಪೋಷಕರು ಮೂಕಾಂಬಿಕೆ ದೇವಿಯ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದು, ಅದು ಈಡೇರಿದ ಹಿನ್ನೆಲೆಯಲ್ಲಿ ವಿಜಯ್ ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.  ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಮತ್ತು  ಜಯಲಲಿತಾ  ಹಲವು ಬಾರಿ ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡಿದ್ದರು.

ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭದ್ರತಾ ಕಾರಣಗಳಿಂದ ಮಧ್ಯಾಹ್ನದಿಂದ ಸಂಜೆವರೆಗೆ  ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ವಿಜಯ್ ಪೂಜೆ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಮರಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!