ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ, ನಟ ವಿಜಯ್ ವ್ಯಕ್ತಪಡಿಸಿರುವ ವಿರೋಧವನ್ನು ಉಲ್ಲೇಖಿಸಿರುವ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
“ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುವ ಯಾರೇ ಆಗಿರಲಿ ಅವರಿಗೆ ಕರ್ನಾಟಕದಲ್ಲಿ ಬೆಂಬಲ ಸಿಗುವುದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವಿಜಯ್ ಅವರು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ” ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರದ ನಿಲುವು ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಪುನರ್ಪರಿಶೀಲನಾ ಅರ್ಜಿಯನ್ನು ಉಲ್ಲೇಖಿಸಿದ ಅವರು ”ವಿಜಯ್ ಅವರ ನಿಲುವು ಕನ್ನಡಿಗರ ಭಾವನೆಗಳಿಗೆ ವಿರುದ್ಧವಾಗಿದೆ. ಅಗತ್ಯವಿದ್ದರೆ ‘ಜನ ನಾಯಗನ್’ ವಿರುದ್ಧವೂ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಕೆವಿಎನ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಜನ ನಾಯಗನ್’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಕರ್ನಾಟಕ ತಮಿಳು ಸಿನಿಮಾದ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ರಾಜ್ಯದಲ್ಲಿ ಬಿಡುಗಡೆಯಾಗದಿದ್ದರೆ ಚಿತ್ರದ ಪ್ರದರ್ಶನದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.





Be the first to comment